ಕೆಂಪಣ್ಣ ಆಯೋಗ ಬರೆದ ಪತ್ರದ ಮೇಲೆ ಹೋರಾಟ ಮಾಡಿದ್ದೆವು, ನಮಗೆ ಅದೇ ದಾಖಲೆ ಎಂದು 40% ಕಮಿಷನ್ ಆರೋಪಕ್ಕೆ ದಾಖಲೆ ಇಲ್ಲ ಎಂದ ಲೋಕಾಯುಕ್ತ ತನಿಖೆ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಇಂದು ಮೈಸೂರಿನಲ್ಲಿ ಹೇಳಿದ್ದಾರೆ.
ಲೋಕಾಯುಕ್ತದವರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎಂದಿದ್ದಾರೆ ಎಂಬುದನ್ನು ನಾವು ನೋಡಬೇಕಿದೆ. ಅಗತ್ಯವಿದ್ದರೆ ಮತ್ತೆ ಅದನ್ನು ಮರುತನಿಖೆಗೆ ಒಳಪಡಿಸಲು ನಾವು ಸಿದ್ದರಿದ್ದೇವೆ. ಮೊದಲು ನಾವು ಲೋಕಾಯುಕ್ತರ ವರದಿ ಓದುತ್ತೇವೆ. ನಂತರ ಅದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಜಮೀರ್ ಅಹಮದ್ ಅವರ ಕರಿಯಾ ಎಂಬ ಹೇಳಿಕೆ ವಿಚಾರವಾಗಿ ಪರಮೇಶ್ವರ್ ಗರಂ ಆಗಿದ್ದಾರೆ. ಜಮೀರ್ ಅಹ್ಮದ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಪರೋಕ್ಷವಾಗಿ ಹೇಳಿದ್ದಾರೆ ಗೃಹ ಸಚಿವ ಪರಮೇಶ್ವರ್. ಜಮೀರ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಖುದ್ದು ಕೆಪಿಸಿಸಿ ಅಧ್ಯಕ್ಷರೆ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಬೇಕಾದರೆ ಪಕ್ಷದ ಶಿಸ್ತು ಪಾಲನ ಸಮಿತಿಗೆ ವರದಿ ಕೊಟ್ಟರೆ ಶಿಸ್ತುಪಾಲನ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳಬಹುದು. ನಾನು ಈ ಹಿಂದೆ ಎಐಸಿಸಿ ಶಿಸ್ತು ಪಾಲನ ಸಮಿತಿ ಸದಸ್ಯನಾಗಿದ್ದೆ, ಆಗ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಡುವ ನಾಯಕರನ್ನ ಅವರು ಎಷ್ಟೇ ದೊಡ್ಡವರಿದ್ದರು ನೋಟಿಸ್ ಕೊಟ್ಟು ಕರೆಸುತ್ತಿದ್ದೇವು. ಅಗತ್ಯವಿದ್ದರೆ ಸಸ್ಪೆಂಡ್ ಕೂಡ ಮಾಡುತ್ತಿದ್ದೆವು. ಈಗಲು ಕೆಪಿಸಿಸಿ ಅಧ್ಯಕ್ಷರು ಶಿಸ್ತು ಪಾಲನ ಸಮಿತಿ ಗಮನಕ್ಕೆ ಈ ವಿಚಾರ ತರಬಹುದು. ಜಮೀರ್ ಹೇಳಿಕೆಯಿಂದ ಚುನಾವಣೆಯಲ್ಲಿ ಸ್ವಲ್ಪ ಪರಿಣಾಮ ಬೀರುತ್ತಿದೆ ಎಂದು ಪಕ್ಷದ ನಾಯಕರೇ ಹೇಳಿದ್ದಾರೆ ಎಂದು ಜಮೀರ್ ಹೇಳಿಕೆಗೆ ಪರೋಕ್ಷವಾಗಿ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅನೇಕಲ್ ಭಾಗದಲ್ಲಿ ಪೊಲೀಸರು ಹೆಚ್ಚು ರೈಡ್ ಮಾಡುತ್ತಿದ್ದಾರೆ, ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಡ್ರಗ್ಸ್ ಬರುತ್ತಿದ್ದನ್ನ ಪೊಲೀಸರು ಹಿಡಿದಿದ್ದಾರೆ. ಮೆಡಿಕಲ್ ಶಾಪ್ಗಳಲ್ಲಿ ಪೊಲೀಸರು ಸರ್ಚ್ ಮಾಡುತ್ತಿದ್ದಾರೆ. ಡ್ರಗ್ಸ್ ಮೇಲೆ ವಾರ್ ಡಿಕ್ಲೇರ್ ಮಾಡಿದ್ದೇವೆ. ಬಹಳಷ್ಟು ಜನರ ಮೇಲೆ ಕೇಸ್ ಹಾಕಿದ್ದೇವೆ. ಹೊರ ದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹೊರ ದೇಶದಿಂದ ಬಂದು ಡ್ರಗ್ಸ್ ಮಾರಾಟ ಮಾಡುವವರ ಮಾಹಿತಿಯನ್ನ ಹೈ ಕಮಿಷನ್ ಹಾಗೂ ರಾಯಾಭಾರಿಗಳಿಗೆ ನೀಡಲಾಗಿದೆ. ಡ್ರಗ್ಸ್ ಮೇಲೆ ರಿಲ್ಯಾಕ್ಸ್ ಮಾಡುವ ಪ್ರಶ್ನೆಯೇ ಇಲ್ಲ. ಮೆಡಿಕಲ್ ಶಾಪ್ ನಲ್ಲಿ ಮಾತ್ರೆಗಳ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಪೋರ್ಟ್ ಮೂಲಕ ಸಿಕ್ಕಾಪಟ್ಟೆ ಡ್ರಗ್ಸ್ ಬರುತ್ತಿದೆ. ಪ್ರತಿನಿತ್ಯ ರೈಡ್ ನಡೆಯುತ್ತಿದೆ. ಡೆಡ್ ಬಾಡಿಯಲ್ಲಿಟ್ಟು ಡ್ರಗ್ಸ್ ತರುತ್ತಿದ್ದಾರೆ. ಹೀಗಾಗಿ ಎರ್ರ್ಪೋರ್ಟ್ ನಲ್ಲಿ ಎಚ್ಚರ ವಹಿಸಬೇಕು ಎಂದಿದ್ದಾರೆ. ವಿಶಾಖಪಟ್ಟಣದಲ್ಲಿ 1500 ಕೆಜಿ ಮೆರವಾನ ಡ್ರಗ್ಸ್ ಹಿಡಿದಿದ್ದಾರೆ, ಹೈಡ್ರೋ ಗಾಂಜಾ ಬಂದಿದೆ, ತುಂಬಾ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಡ್ರಗ್ಸ್ ಜಾಲದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸಮರ್ಥಿಸಿಕೊಂಡ ಗೃಹ ಸಚಿವ ಪರಮೇಶ್ವರ್, ನಮ್ಮ ಗ್ಯಾರಂಟಿಗಳೇ ಬೇರೆ ವಿಚಾರ, ಇದಕ್ಕೂ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೂ ಸಂಬಂಧ ಇಲ್ಲ, ಈಗಾಗಲೇ ಸರ್ಕಾರಿ ನೌಕರರು, ಎರಡು ಕಾರು ಹೊಂದಿರುವವರು, ತೆರಿಗೆ ಕಟ್ಟುತ್ತಿರುವವವರು, ಮೂರು ಹೆಕ್ಟೇರ್ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಬಳಸುತ್ತಿದ್ದಾರೆ. ಅಂತವರು ತಾವೇ ಕಾರ್ಡ್ ವಾಪಸ್ಸು ಮಾಡಬೇಕಾಗಿತ್ತು. ಈಗ ನಾವುಗಳು ಅದನ್ನು ಪರಿಷ್ಕರಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ, ಈ ಕೆಲಸವನ್ನು ಮುಂಚೆ ಮಾಡಬೇಕಾಗಿತ್ತು, ತಡವಾದವರು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.