ಬೆಂಗಳೂರು ನಗರದ ಹಳೆ ಮದ್ರಾಸ್ ರಸ್ತೆಯಿಂದ ಕೆಆರ್ಪುರ ಹೊಸ ಪೊಲೀಸ್ ಠಾಣೆವರಗಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಇಂದಿನಿಂದ (ನ.19) ರಿಂದ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಈ ಕುರಿತು ಬೆಂಗಳೂರು ನಗರ ಸಂಚಾರಿ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ಮಾಹಿತಿ ತಿಳಿಸಿದ್ದಾರೆ.
ಹಳೆ ಮದ್ರಾಸ್ ರಸ್ತೆಯ ಬಿಬಿಎಂಪಿ ಜಂಕ್ಷನ್ನಿಂದ ಕೆಆರ್ಪುರ ಹೊಸ ಪೊಲೀಸ್ ಠಾಣೆ ಪಶು ಆಸ್ಪತ್ರೆವರೆಗಿನ ರಸ್ತೆಯನ್ನು ಪ್ರಾಯೋಗಿಕವಾಗಿ ಏಕಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ಹಳೆ ಮದ್ರಾಸ್ ರಸ್ತೆಯ ಬಿಬಿಎಂಪಿ ಜಂಕ್ಷನ್ ಯು ಟರ್ನ್ ಅನ್ನು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಬಂಧ ಪ್ರಾಯೋಗಿಕವಾಗಿ ಮುಚ್ಚಲಾಗಿದೆ.
ಮಾರ್ಗ ಬದಲಾವಣೆ
- ಹಳೆ ಮದ್ರಾಸ್ ರಸ್ತೆಯಿಂದ ಕೆಆರ್ಪುರ ಹೊಸ ಪೊಲೀಸ್ ಠಾಣೆ ಮಾರ್ಗವಾಗಿ ಕೆಆರ್ಪುರ ಗ್ರಾಮ ಮತ್ತು ಟಿ.ಸಿ ಪಾಳ್ಯ, ಆನಂದಪುರ ಕಡೆಗೆ ಸಂಚರಿಸುವ ವಾಹನ ಸವಾರರು ಫ್ರೀ ಲೆಪ್ಸ್ ಟರ್ನ್ ಪಡೆದು ಮುಂದೆ ಸಂಚರಿಸಬಹುದಾಗಿದೆ.
- ಐಟಿಐ ಗೇಟ್ ಕಡೆಯಿಂದ ಹೊಸಕೋಟೆ ಕಡೆಗೆ ಹೋಗುವ ಬಿಎಂಟಿಸಿ ಬಸ್ಗಳು ಕಡ್ಡಾಯವಾಗಿ ಶ್ರೀರಾಮ ಆಸ್ಪತ್ರೆ ಬಳಿ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಹತ್ತಿಸಿಕೊಂಡು ಹೋಗಬೇಕು.
- ಐಟಿಐ ಗೇಟ್ ಕಡೆಯಿಂದ ಡಿಸೇಲ್ ಶೆಡ್ ರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ಹೋಗುವ ಬಿಎಂಟಿಸಿ ಬಸ್ಗಳು ಸರ್ಕಾರಿ ಕಾಲೇಜ್ ಜಂಕ್ಷನ್ ಬಳಿ ಯು ಟರ್ನ್ ಪಡೆದು ಎಡಭಾಗದಲ್ಲಿ ಚಲಿಸಿ ಡಿಪೋ ಕಡೆಗೆ ಸಂಚರಿಸಬೇಕು.
- ಆನಂದಪುರ ಮತ್ತು ಕೆಆರ್ಪುರ ಗ್ರಾಮದ ಕಡೆಯಿಂದ ಬರುವ ವಾಹನ ಸವಾರರು ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ ಹಾಸನ್ ಅಯ್ಯಂಗಾರ್ ಬೇಕರಿ ಬಳಿ ಎಡ ತಿರುವು ಪಡೆದು ಹಳೆ ಮದ್ರಾಸ್ ರಸ್ತೆ ಮೂಲಕ ಸಂಚರಿಸಿ ಜಿಆರ್ಟಿ ಬಳಿ ಯು ಟರ್ನ್ ಪಡೆದು ನಗರದ ಕಡೆಗೆ ಸಂಚರಿಸಬೇಕು.
- ಐಟಿಐ ಗೇಟ್ ಕಡೆಯಿಂದ ಬರುವ ಭಾರಿ ಸರಕು-ಸಾಗಣೆ ವಾಹನಗಳು ಸರ್ಕಾರಿ ಕಾಲೇಜ್ ಜಂಕ್ಷನ್ನಲ್ಲಿ ಯು ಟರ್ನ್ ಪಡೆದು ನಗರದ ಕಡೆಗೆ ಸಂಚರಿಸಬೇಕು.
- ಟಿಸಿ ಪಾಳ್ಯ ಕಡೆಯಿಂದ ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಮುನಿಯಪ್ಪ ಗಾರ್ಡನ್ ಬಳಿ ಎಡ ತಿರುವು ಪಡೆದು ಸರ್ಕಾರಿ ಕಾಲೇಜ್ ರಸ್ತೆ ಮೂಲಕ ಸರ್ಕಾರಿ ಕಾಲೇಜ್ ಜಂಕ್ಷನ್ ತಲುಪಿ ನಗರದ ಕಡೆಗೆ ಸಂಚರಿಸಬೇಕು.
- ಕೆಆರ್ಪುರ ಮಾರುಕಟ್ಟೆ ಕಡೆಯಿಂದ ಕೆಆರ್ಪುರ ಗ್ರಾಮದ ಕಡೆಗೆ ಸಂಚರಿಸುವ ವಾಹನ ಸವಾರರು ಸರ್ಕಾರಿ ಆಸ್ಪತ್ರೆ ಜಂಕ್ಷನ್ ಬಳಿ ಬಲ ತಿರುವು ಪಡೆದು ಕೆಆರ್ಪುರ ಹೊಸ ಪೊಲೀಸ್ ಠಾಣೆ ಮಾರ್ಗವಾಗಿ ಮುಂದೆ ಸಂಚರಿಸಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
Continue Reading