ಹೇರ್ಡ್ರೈಯರ್ ಬ್ಲಾಸ್ಟ್ ಆಗಿ ಹುತಾತ್ಮ ಯೋಧನ ಪತ್ನಿಯ ಎರಡೂ ಮುಂಗೈ ಕಟ್ ಆಗಿ ಛಿದ್ರಗೊಂಡಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಶಶಿಕಲಾ ಎಂಬುವವರ ಹೆಸರಿನಲ್ಲಿ ಬಂದ ಪಾರ್ಸಲ್ ಅನ್ನು ಬಸಮ್ಮ ಎಂಬ ಮಹಿಳೆ ತೆಗೆದುಕೊಂಡಿದ್ದರು. ಪಾರ್ಸಲ್ ತೆರೆದು ಹೇರ್ ಡ್ರೈಯರ್ ಆನ್ ಮಾಡಿದಾಗ ಸ್ಫೋಟಗೊಂಡಿದೆ. ಈ ಘಟನೆಯು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಸಮ್ಮ ಯರನಾಳ ಅವರು ಹುತಾತ್ಮ ಯೋಧನ ಪತ್ನಿಯಾಗಿದ್ದು, ಬಸಮ್ಮ ಅವರ ಪತಿ ಪಾಪಣ್ಣ ಮಾಜಿ ಯೋಧರಾಗಿದ್ದಾರೆ. 2028ರಲ್ಲಿ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ಪಾಪಣ್ಣ ಮೃತಪಟ್ಟಿದ್ದರು. ಗಂಡನನ್ನು ಕಳೆದುಕೊಂಡಿದ್ದ ಬಸಮ್ಮ ಅವರು ಬಾಗಲಕೋಟೆಯ ಇಳಕಲ್ ನಗರದಲ್ಲಿ ವಾಸಿಸುತ್ತಿದ್ದರು. ಇದೀಗ ಈ ಘಟನೆಯಿಂದ ಅವರು ತಮ್ಮ ಕೈಗಳನ್ನು ಕಳೆದುಕೊಂಡಿದ್ದಾರೆ.
ಅಂದಹಾಗೆ ಆನ್ಲೈನ್ನಲ್ಲಿ ಬಂದಿದ್ದ ಈ ಹೇರ್ಡ್ರೈಯರ್ ಬಸಮ್ಮ ಅವರ ಹೆಸರಿಗೆ ಬಂದಿದ್ದಾಗಿರಲಿಲ್ಲ. ಶಶಿಕಲಾ ಎಂಬುವರ ಹೆಸರು ನಂಬರ್ ಹೊಂದಿದ್ದ ಡಿಟಿಡಿಸಿ ಪಾರ್ಸಲ್ ಕೊರಿಯರ್ ಇದಾಗಿದ್ದು, ಶಶಿಕಲಾ ಪತಿ ಕೂಡ ಮೃತ ಯೋಧರಾಗಿದ್ದಾರೆ. ಪಾರ್ಸಲ್ನಲ್ಲಿ ಶಶಿಕಲಾ ಹೆಸರು ಮೊಬೈಲ್ ನಂಬರ್ ಇದ್ದ ಕಾರಣ ಕೊರಿಯರ್ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಶಶಿಕಲಾ ಬೇರೆ ಊರಲ್ಲಿ ಇದ್ದ ಕಾರಣ ಬಸಮ್ಮ ಅವರಿಗೆ ಕೊರಿಯರ್ ಪಡೆದು ಓಪನ್ ಮಾಡಲು ಹೇಳಿದ್ದರು.
ಬಸಮ್ಮ ಅವರು ಕೊರಿಯರ್ ಓಪನ್ ಮಾಡಿದಾಗ ಅದರಲ್ಲಿ ಹೇರ್ ಡ್ರೈಯರ್ ಇತ್ತು. ಬಸಮ್ಮ ಅವರಿಗೆ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ಅಂದಿದ್ದಕ್ಕೆ ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಬ್ಲಾಸ್ಟ್ ಜೋರಾಗಿ ಸದ್ದು ಕೇಳಿ ಬಂದಿದೆ. ಕ್ಷಣ ಮಾತ್ರದಲ್ಲಿ ಬಸಮ್ಮ ಅವರ ಕೈ ಪುಡಿ ಪುಡಿಯಾಗಿದ್ದು, ನಂತರ ಬಸಮ್ಮ ಅವರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಶಶಿಕಲಾ ಅವರು ಹೇಳುವ ಪ್ರಕಾರ, ಹೇರ್ ಡ್ರೈಯರ್ ಆರ್ಡರ್ ಮಾಡಿಲ್ಲವಂತೆ. ಆದರೆ, ಅವರ ಹೆಸರಲ್ಲಿ ಹೇರ್ ಡ್ರೈಯರ್ ಪಾರ್ಸಲ್ ಹೇಗೆ ಬಂತು? ಹಣ ನೀಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಾಗಿದೆ. ಇನ್ನು, ಹೇರ್ ಡ್ರೈಯರ್ ಆಂಧ್ರದ ವಿಶಾಖಪಟ್ಟಣದಲ್ಲಿ ತಯಾರಾಗಿದೆ ಎಂಬ ಅಂಶ ತಿಳುದುಬಂದಿದೆ. ಹೀಗಾಗಿ, ಈ ಸ್ಫೋಟ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.