ವಿಕ್ರಮ್ ಗೌಡ ಎನ್ಕೌಂಟರ್ ಬಗ್ಗೆ ಕೆಲ ಎಡಪಂಥೀಯರು ಅನುಮಾನ ವಿಚಾರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಇಂದು ಮಾತನಾಡಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ವಿಕ್ರಮ್ ಗೌಡ ಬಳಿ ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು. ವಿಕ್ರಮ್ ಮೇಲೆ ಕೊಲೆ ಆರೋಪ ಸೇರಿ 60 ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಪೊಲೀಸರು ಶೂಟ್ ಮಾಡದಿದ್ದರೆ ವಿಕ್ರಮ್ ಗೌಡ ಪೊಲೀಸರನ್ನೇ ಶೂಟ್ ಮಾಡುವ ಸಾಧ್ಯತೆ ಇತ್ತು. ಹೀಗಾಗಿ ಎನ್ಕೌಂಟರ್ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಬಂದ ಮೇಲೆ ನಕ್ಸಲ್ ಚಟುವಟಿಕೆ ಜಾಸ್ತಿಯಾಗಿದೆ ಎಂಬ ಶಾಸಕ ಸುನೀಲ್ ಕುಮಾರ್ ಆರೋಪಕ್ಕೆ, ಪ್ರತಿಕ್ರಿಯಿಸಿದ ಹೋಮ್ ಮಿನಿಸ್ಟರ್, ನಕ್ಸಲ್ ನಿಗ್ರಹ ಪಡೆಯ ಕೇಂದ್ರ ಸ್ಥಳ ಕಾರ್ಕಳದಲ್ಲೇ ಇದೆ. ನಕ್ಸಲ್ ನಿಗ್ರಹ ದಳ ಸತತವಾಗಿ ನಕ್ಸಲರ ಚಟುವಟಿಕೆ ಮೇಲೆ ನಿಗಾ ಇಟ್ಟುಕೊಂಡೇ ಬಂದಿತ್ತು. ಆದರೆ ಕಳೆದ 15 ದಿನಗಳ ಹಿಂದೆ ನಕ್ಸಲ್ ಮುಖಂಡರಾದ ಲತಾ ಹಾಗೂ ರಾಜು ಕಾಣಿಸಿಕೊಂಡರು. ಆಗ ಕೂಂಬಿಂಗ್ ಮಾಡುವುದಕ್ಕೆ ಶುರು ಮಾಡಿದರು ಎಂದು ತಿಳಿಸಿದರು.
ಈ ಮಧ್ಯೆ ವಿಕ್ರಮ್ ಗೌಡ ತಂಡದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿತು. ವಿಕ್ರಮ್ ಗೌಡನನ್ನು ಹಾಗೇ ಬಿಟ್ಟುಕೊಂಡು ಅವರು ಏನು ಮಾಡಿದರೂ ಸರಿ ಎನ್ನುವ ಪರಿಸ್ಥಿತಿ ಇರಲಿಲ್ಲ. ಅದಕ್ಕಾಗಿ ಎನ್ಕೌಂಟರ್ ಮಾಡಲಾಗಿದೆ. ಈ ಎನ್ಕೌಂಟರ್ ಮೇಲೆ ತನಿಖೆ ಆಗಬೇಕು ಅಂತ ಕೆಲವರು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಮಷಿನ್ ಗನ್ ಇಟ್ಟುಕೊಂಡಿದ್ದ 60 ಪ್ರಕರಣ ಇರುವ ವಿಕ್ರಮ್ ಗೌಡ ಎನ್ಕೌಂಟರ್ ಬಗ್ಗೆ ಯಾವ ದೃಷ್ಟಿಯಿಂದ ತನಿಖೆ ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.
ನಾವು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಇಲ್ಲಿ ಕಾಂಗ್ರೆಸ್ ಬಿಜೆಪಿ ಎನ್ನುವ ಪ್ರಶ್ನೆ ಇಲ್ಲಿ ಬರಲ್ಲ, ಸುರಕ್ಷತೆ ಮುಖ್ಯ. ಈ ಹಿಂದೆಯೇ ಆತನಿಗೆ ಶರಣಾಗುವಂತೆ ಸೂಚಿಸಲಾಗಿತ್ತು. ಆದರೆ ಶರಣಾಗಿರಲಿಲ್ಲ ಎಂದು ಪರಮೇಶ್ವರ್ ಹೇಳಿದರು.
ಬಿಪಿಎಲ್ ಕಾರ್ಡ್ ಗಳ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಯಾವ ಕಾರಣಕ್ಕೆ, ಯಾವ ಮಾನದಂಡದ ಅಡಿ ಕ್ಯಾನ್ಸೆಲ್ ಮಾಡ್ತಿದ್ದಾರೆ ಅಂತ ಮನವರಿಕೆ ಮಾಡಿ ಕೊಡಲು ಈಗಾಗಲೇ ಡಿಸಿಗಳಿಗೆ ಸೂಚಿಸಲಾಗಿದೆ. ಅನರ್ಹ ಕಾರ್ಡ್ ಗಳನ್ನು ಮಾತ್ರ ರದ್ದು ಮಾಡಿ ಅಂತ ಹೇಳಲಾಗಿದೆ. ಕೆಲವೊಂದು ಲೋಪಗಳಾಗಿರಬಹುದು, ಇದರ ಬಗ್ಗೆ ಈಗಾಗಲೇ ಸಿಎಂ ಮಾತನಾಡಿದ್ದಾರೆ. ಕೆಲವೊಂದು ಕಡೆ ಅರ್ಹರ ಕಾರ್ಡ್ ಗಳನ್ನು ತೆಗೆದಿದ್ರೆ ಸರಿ ಪಡಿಸೋದಾಗಿ ಸಿಎಂ ಕೂಡ ಹೇಳಿದ್ದಾರೆ. ಅನರ್ಹರ ಕಾರ್ಡ್ ಗಳನ್ನು ಮಾತ್ರ ನಿಯಮಾನುಸಾರ ಪರಿಷ್ಕರಿಸುವ ಕೆಲಸ ಆಗ್ತಿದೆ. ಅಧಿಕಾರಿಗಳು ಲೋಪಗಳನ್ನು ಮಾಡಿದ್ರೆ ಸರಿ ಪಡಿಸ್ತಾರೆ.
ಲೋಕಾಯುಕ್ತ ಕಚೇರಿಗೆ ನಿನ್ನೆ ರಾತ್ರಿ ಸಿಎಂ ಬಾಮೈದ ದಿಢೀರ್ ಭೇಟಿ ವಿಚಾರಕ್ಕೆ ಮಾತನಾಡಿದ ಪರಮೇಶ್ವರ್, ಇದರ ಬಗ್ಗೆ ನನಗೆ ಗೊತ್ತಿಲ್ಲ, ತನಿಖೆಗೆ ಹೋಗಿರಬಹುದು, ಅದು ಬಿಟ್ಟು ಬೇರೆ ಯಾವುದಕ್ಕೆ ಹೋಗಿದ್ರು ಅಂತ ಗೊತ್ತಿಲ್ಲ, ರಾತ್ರಿ ಹೋಗಿದ್ದರೆ ಲೋಕಾಯುಕ್ತ ಕಚೇರಿಗೆ ಬೀಗ ಹಾಕಿರ್ತಾರಲ್ಲ? ಹೇಗೆ ಹೋಗ್ತಾರೆ? ಬೀಗ ಹಾಕಿದ್ದಾರೋ ಇಲ್ವೋ ಅಂತ ನೋಡೋಕ್ಕೆ ಹೋಗಿರಬಹುದು ಎಂದು ಹಾಸ್ಯದ ರೂಪದಲ್ಲಿ ಉತ್ತರಿಸಿದ್ದಾರೆ ಗೃಹ ಸಚಿವ ಪರಮೇಶ್ವರ್.