ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ದಾರರು ಇದ್ದಾರೆ ಎಂಬ ಸತ್ಯಸಂಗತಿ ಬಯಲಾಗಿದೆ. ಇವುಗಳನ್ನು ರದ್ದುಪಡಿಸಿ ಎಪಿಎಲ್ಗೆ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್ಗಳು ಸಹ ರದ್ದಾಗಿವೆ. ಇದರಿಂದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವನ್ನಿಟ್ಟುಕೊಂಡು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಬಿಪಿಎಲ್ ಕಾರ್ಡ್ ಗುದ್ದಾಟದ ಮಧ್ಯ ಸರ್ಕಾರದ ಕಣ್ಣು ಇದೀಗ ಕಾರ್ಮಿಕರ ಕಾರ್ಡಿನ ಮೇಲೆ ಬಿದ್ದಿದ್ದು, ಅನರ್ಹರು ಪಡೆದುಕೊಂಡಿರುವ ಕಾರ್ಮಿಕರ ಕಾರ್ಡ್ಗಳನ್ನು ಗುರುತಿಸಿ ರದ್ದು ಮಾಡಲಾಗುತ್ತಿದೆ.
ಎಷ್ಟು ಕಾರ್ಡ್ ಅಮಾನತು?
ರಾಜ್ಯದಲ್ಲಿ ಒಟ್ಟು 2,46,951 ಕಾರ್ಮಿಕ ಕಾರ್ಡಗಳು ನಕಲಿ ಎಂದು ಕಾರ್ಮಿಕ ಇಲಾಖೆ ಲಿಸ್ಟ್ ಮಾಡಿದ್ದು, ಇದೀಗ ಅವುಗಳನ್ನು ಸಹ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕಲ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38 ಲಕ್ಷದ 42 ಸಾವಿರ ಕಾರ್ಮಿಕರು ನೋಂದಣಿ ಮಾಡಿಕೊಂಡು ಕಾರ್ಡ್ ಪಡೆದುಕೊಂಡಿದ್ದಾರೆ. ಈ 38.42 ಲಕ್ಷ ಕಾರ್ಡ್ಗಳ ಪೈಕಿ 2,46,951 ಕಾರ್ಡ್ ನಕಲಿ ಎಂದು ಗೊತ್ತಾಗಿ ಅವುಗಳನ್ನು ರದ್ದು ಮಾಡಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಕಟ್ಟ ಕಾರ್ಮಿಕ ಕಾರ್ಡ್ ರದ್ದಾಗಿರುವುದು ಹಾವೇರಿಯಲ್ಲಿ. ಜಿಲ್ಲೆಯಲ್ಲಿ ಒಟ್ಟು 1,69,180 ಕಾರ್ಡ್ ಗಳು ಅಮಾನತು ಮಾಡಲಾಗಿದೆ.
ಈ ಕಾರ್ಮಿಕ ಕಾರ್ಡ್ನಿಂದ ಮದುವೆ, ಮರಣ, ಹೆರಿಗೆ, ಅಪಘಾತ ಸಂದರ್ಭದಲ್ಲಿ ದೊಡ್ಡ ಮೊತ್ತದ ಆರ್ಥಿಕ ನೆರವು ದೊರೆಯುತ್ತೆ. ಈ ಹಿನ್ನೆಲೆಯಲ್ಲಿ ನಕಲಿ ಜಾಬ್ ಕಾರ್ಡ್ಗಳನ್ನು ಸೃಷ್ಟಿಸಲಾಗಿದೆ. ಆನ್ ಲೈನ್ನಲ್ಲೇ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯುವ ಅವಕಾಶ ಇದ್ದು, ಲಕ್ಷಾಂತರ ಜನ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಕಾರ್ಮಿಕ ಇಲಾಖೆಗೆ ದಾಖಲೆ ಪರಿಶೀಲನೆ ಕಷ್ಟವಾಗ್ತಿದೆ. ಇದು ನಕಲಿ ಕಾರ್ಡ್ ಪಡೆಯುವವರಿಗೆ ಅನುಕೂಲ. ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್ ಸಂಯೋಜಿಸಿ ಆಧಾರ್ ಕಾರ್ಡ್ ಆಧಾರಿತ ನೋಂದಣಿ ಮಾಡುವ ಮೂಲಕ ಅರ್ಹರಿಗೆ ಮಾತ್ರ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇದರೊಂದಿಗೆ ನಕಲಿ ಕಾರ್ಡ್ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದೆ.