ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಟ ಧನುಷ್ ನಡುವಿನ ಸಮರ ಮತ್ತೊಂದು ಹಂತಕ್ಕೇರಿದ್ದು, ನಯನತಾರಾ ಬಿಯಾಂಡ್ ದಿ ಫೇರ್ ಟೇಲ್ ಡಾಕ್ಯುಮೆಂಟರಿಯಲ್ಲಿ ವಿವಾದಿತ ವಿಡಿಯೋವನ್ನು ತೆಗೆದುಹಾಕದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಟ ಧನುಷ್ ಪರ ವಕೀಲ ನಟಿ ನಯನತಾರಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ವಿವಾದಿತ ವಿಡಿಯೋ ಕುರಿತು ನಟ ಧನುಷ್ 10 ಕೋಟಿ ರೂಗಳ ಪರಿಹಾರ ಕೇಳಿ ನೋಟಿಸ್ ಕಳುಹಿಸಿದ ಬೆನ್ನಲ್ಲೇ, ನಟಿ ನಯನತಾರಾ ರೊಚ್ಚಿಗೆದ್ದಿದ್ದಾರೆ. ಪತ್ರದ ಮೂಲಕ ನಟ ಧನುಷ್ಗೆ ಉತ್ತರ ನೀಡಿದ ನಯನತಾರಾ, ಧನುಷ್ ಅವರೇ ನಿಮಗೆ ನಿಮ್ಮ ತಂದೆ, ಸಹೋದರರ ಬೆಂಬಲವಿದೆ. ಅವರ ಬೆಂಬಲದಿಂದ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದೀರಿ. ನನ್ನಂತಹವರು ಯಾರ ಬೆಂಬಲವೂ ಇಲ್ಲದೆ ಗಾಡ್ ಫಾದರ್ ಇಲ್ಲದೆ ಬೆಳೆಯುವುದು ಎಷ್ಟು ಕಷ್ಟ ಎಂದು ಗೊತ್ತಿದೆ. ನನ್ನ ಡಾಕ್ಯುಮೆಂಟರಿ ರಿಲೀಸ್ ಆಗ್ತಿರೋದು ನನಗಷ್ಟೇ ಅಲ್ಲ, ನನ್ನ ಅಭಿಮಾನಿಗಳು, ಹಿತೈಷಿಗಳಿಗೆ ಖುಷಿ ಕೊಟ್ಟಿರೋ ವಿಷಯ.
ಡಾಕ್ಯುಮೆಂಟರಿಯನ್ನು ಬಹಳ ಜನ ಕಷ್ಟಪಟ್ಟು ಮಾಡಿದ್ದಾರೆ. ಆ ಸಿನಿಮಾ ನಿಮ್ಮೊಬ್ಬರದ್ದೇ ಅಲ್ಲ, ನನ್ನ ಪತಿ ಮತ್ತು ನಾನು ಸೇರಿದಂತೆ ಹಲವರ ಶ್ರಮ ಆ ಸಿನಿಮಾಗೆ ಇದೆ. ಈ ಡಾಕ್ಯುಮೆಂಟರಿಯಲ್ಲಿ ನನ್ನ ಸಿನಿಮಾ, ನನ್ನ ಹಿತೈಷಿಗಳು, ನನ್ನ ಪ್ರೀತಿ, ನನ್ನ ಮದುವೆ ಎಲ್ಲವನ್ನೂ ಒಳಗೊಂಡಿದೆ. ಆದರೆ ಆ ಡಾಕ್ಯುಮೆಂಟರಿಯಲ್ಲಿ ನನ್ನ ವೃತ್ತಿ ಜೀವನದ ಬಹುಮುಖ್ಯ ಸಿನಿಮಾ ಆದ ನಾನುಂ ರೌಡಿದಾನ್ ಚಿತ್ರದ ಕುರಿತು ಪ್ರಸ್ತಾಪವೇ ಇಲ್ಲ. ಎರಡು ವರ್ಷಗಳಿಂದ ನಿಮ್ಮ ಬಳಿ ಎನ್ಒಸಿ ಪಡೆಯುವುದಕ್ಕೆ ಅಲೆಯುತ್ತಿದ್ದರೂ ನೀವು ಕೊಟ್ಟಿಲ್ಲ. ಹಾಗಾಗಿ ಅದನ್ನು ಡಾಕ್ಯುಮೆಂಟರಿಯಲ್ಲಿ ಕೈಬಿಟ್ಟಿದ್ದೇವೆ. ರೀ-ಎಡಿಟ್ ಮಾಡಿಸುತ್ತಿದ್ದೇವೆ. ಸಿನಿಮಾದ ದೃಶ್ಯಗಳನ್ನು ಬಿಡಿ, ಸಂಗೀತ, ಸಾಹಿತ್ಯವನ್ನು ಬಳಸುವುದಕ್ಕೂ ನೀವು ಅನುಮತಿ ಕೊಡಲಿಲ್ಲ ಎಂದು ಸುದೀರ್ಘ ಪತ್ರ ಬರೆದು ತಿರುಗೇಟು ನೀಡಿದ್ದರು.
ಇನ್ನು ಈ ಬಗ್ಗೆ ಮತ್ತೊಮ್ಮೆ ನಟ ಧನುಷ್ ಗೆ ನಯನತಾರಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು, ತನ್ನ ಕುರಿತ ಡಾಕ್ಯುಮೆಂಟರಿಗೆ NOC ನೀಡಿದಂತಹ ಎಲ್ಲಾ ನಿರ್ಮಾಪಕರುಗಳಿಗೆ ನಯನತಾರಾ ಧನ್ಯವಾದ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ನಿರ್ಮಾಪಕರುಗಳಿಗೆ ಹೆಸರು ಸಮೇತ ನಯನತಾರ ಧನ್ಯವಾದ ಅರ್ಪಣೆ ಮಾಡಿದ್ದಾರೆ. ಶಾರೂಖ್ ಖಾನ್ ದಂಪತಿಯಿಂದ ಹಿಡಿದು, ಸನ್ ಪಿಕ್ಚರ್ಸ್, ಲೈಕಾ ಪ್ರೊಡಕ್ಷನ್ ವರೆಗೆ ಎಲ್ಲರಿಗೂ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ.