ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಶ್ರೀ ಶಿವದತ್ತ ಪ್ರತ್ಯಂಗಿರಿ ಆಶ್ರಮದಲ್ಲಿ ನಡೆಯುವ ಈ ಅಭಿಷೇಕದಲ್ಲಿ ಸುಮಾರು 100 ಕೆಜಿ ಮೆಣಸಿನಕಾಯಿಯನ್ನು ಬಳಸಲಾಗುತ್ತದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಬಹಳ ಪ್ರಿಯ ಎಂದು ನಂಬಲಾಗಿದೆ ಮತ್ತು ಈ ಅಭಿಷೇಕವು ಕಷ್ಟಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ.
ಅಭಿಷೇಕ ಎಂದರೆ ಎಲ್ಲರಿಗೂ ನೆನಪಾಗುವುದು ಹಾಲು, ಪಂಚಾಮೃತ, ಜೇನು ಇತ್ಯಾದಿಗಳಿಂದ ಕಲ್ಲಿನ ರೂಪದಲ್ಲಿ ವಿಗ್ರಹಗಳಿಗೆ ಅಭಿಷೇಕ ಮಾಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳು ಸೇರಿಂದಂತೆ ರಾಜಕಾರಣಿ, ಸಿನಿಮಾ ನಟರಿಗೆ ಅಭಿಷೇಕ ಮಾಡುವುದು ಹೆಚ್ಚಾಗಿ ಬಿಟ್ಟಿದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಇದೀಗ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆದ ಮೆಣಸಿನ ಪುಡಿಯ ಅಭಿಷೇಕ ಎಲ್ಲೆಡೆ ವೈರಲ್ ಆಗಿದೆ.
ಏಲೂರು ಜಿಲ್ಲೆಯ ದೊರಸಾನಿಪಾಡುವಿನ ಶ್ರೀ ಶಿವದತ್ತ ಪ್ರತ್ಯಂಗಿರಿ ಆಶ್ರಮದಲ್ಲಿ ನಡೆದ ಈ ಅಭಿಷೇಕವನ್ನು ಕರಂ ಅಭಿಷೇಕ ಎಂದು ಕರೆಯಲಾಗುತ್ತದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾಕಷ್ಟು ಜನರು ಪಾಲ್ಗೊಳ್ಳುತ್ತಾರೆ. ಶ್ರೀ ಶಿವದತ್ತ ಸ್ವಾಮೀಜಿಯ ಮೇಲೆ ಸುಮಾರು 100 ಕೆಜಿ ಮೆಣಸಿನಕಾಯಿಯಿಂದ ಅಭಿಷೇಕ ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸುವುದು ವಾಡಿಕೆಯಾಗಿದ್ದು, ಕಳೆದ 14 ವರ್ಷಗಳಿಂದ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರಲಾಗುತ್ತಿದೆ.
ಇಲ್ಲಿ ಪೂಜಿಸುವ ಪ್ರತ್ಯಂಗಿರಿ ದೇವಿಗೆ ಕೆಂಪು ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ಅಲ್ಲದೆ ಪ್ರತ್ಯಂಗಿರಿ ದೇವಿಗೆ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗುತ್ತದೆ. ಅಂತಹ ಕೆಂಪು ಮೆಣಸಿನಕಾಯಿಯನ್ನು ಹುರಿದು ಪ್ರತ್ಯಂಗಿರಿ ಶಿವನಿಗೆ ಅಭಿಷೇಕ ಮಾಡಿದರೆ ಅವರ ಕಷ್ಟಗಳು ಮತ್ತು ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ.