ಕೆ.ಎಸ್. ಈಶ್ವರಪ್ಪ ಅವರು ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹಾಳಾಗಿದೆ ಎಂದಿರುವುದು ನೋವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಬಿ.ವೈ. ರಾಘವೇಂದ್ರ, ಈಶ್ವರಪ್ಪ ಅವರು 2 ವಾರಗಳ ಹಿಂದೆ ರಾಘಣ್ಣ ನೆಚ್ಚಿನ ಸಂಸದ. ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಬೇಕು ಎಂದು ಆಶೀರ್ವಾದ ಮಾಡಿದ್ದರು. ಈಗ ಅವರ ಬದಲಾವಣೆಗೆ ಕಾರಣ ನನಗಂತೂ ಅರ್ಥವಾಗುತ್ತಿಲ್ಲ ಇದಕ್ಕೆಲ್ಲ ಮುಂದಿನ ದಿನದಲ್ಲಿ ಮತದಾರರೇ ಉತ್ತರಿಸ್ತಾರೆ ಎಂದರು. ಯಡಿಯೂರಪ್ಪ ಅವರ ಜೊತೆ ಸೇರಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಈಶ್ವರಪ್ಪ ಅವರ ಪಾತ್ರವೂ ಇದೆ. ಆದರೆ, ಇತ್ತೀಚೆಗೆ ಕಾರ್ಯಕರ್ತರ ಸಭೆ ಕರೆದು ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೇಂದ್ರ ನಾಯಕರು ಹಾಗೂ ಯಡಿಯೂರಪ್ಪ ಅವರಿಗೆ ಸಂದೇಶ ನೀಡುತ್ತೇನೆ ಎಂದು ಈಶ್ವರಪ್ಪ ಬಹಿರಂಗವಾಗಿ ಹೇಳಿದ್ದಾರೆ. ಅದೇ ರೀತಿ, ಪ್ರಧಾನಿ ಮೋದಿ ಬಗ್ಗೆ ಗೌರವವಿದೆ. ಆದರೆ, ಹೈಕಮಾಂಡ್ ಗೆ ಬುದ್ಧಿ ಕಲಿಸುತ್ತೇನೆ ಎಂದೂ ಹೇಳಿದ್ದಾರೆ. ಆದ್ದರಿಂದ, ಈಶ್ವರಪ್ಪ ಅವರ ದ್ವಂದ್ವ ನಿಲುವು ತಿಳಿಯುತ್ತಿಲ್ಲ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.