ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (ರೀಚ್-5) ಬಹುತೇಕ ಪರೀಕ್ಷೆಗಳನ್ನು ಪೂರ್ಣಗೊಂಡಿದ್ದು, ಮೂರು ರೈಲುಗಳೊಂದಿಗೆ ಜನವರಿಯಲ್ಲಿ ಸಂಚಾರ ಆರಂಭಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ. ಇದರಲ್ಲಿ ಡಿಸೆಂಬರ್ ತಿಂಗಳಲ್ಲಿ ಒಂದು ರೈಲು ಹಾಗೂ ಜನವರಿಯಲ್ಲಿ ಮತ್ತೊಂದು ರೈಲು ಸೇರ್ಪಡೆಯಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಹಳದಿ ಮಾರ್ಗದ ಮೆಟ್ರೋ ಆರ್ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಸಂಚಾರ ಮಾಡಲಿದ್ದು, ಎಲೆಕ್ಟ್ರಾನಿಕ್ ಸಿಟಿಯ ಟ್ರಾಫಿಕ್ಗೆ ಹೈರಾಣಾಗಿದ್ದ ಮಂದಿಗೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಈ ಮಾರ್ಗದ ಸಿವಿಲ್ ಕಾಮಗಾರಿ, ಎಲೆಕ್ಟ್ರಿಕಲ್, ಸಿಗ್ನಲಿಂಗ್ ಸೇರಿದಂತೆ ಎಲ್ಲಾ ಕೆಲಸಗಳು ಮುಗಿದಿದ್ದು, ಬೋಗಿಗಳ ಕೊರತೆಯಿಂದ ವಾಣಿಜ್ಯ ಸಂಚಾರ ಆರಂಭವಾಗಿಲ್ಲ.
ಹಳದಿ ಮಾರ್ಗದ ಸಂಚಾರಕ್ಕೆ ರೈಲುಗಳನ್ನು ಒದಗಿಸುವ ಟಿಟಾಗರ್ ವ್ಯಾಗನ್ಸ್ ಸಂಸ್ಥೆಯ ವಿಳಂಬದಿಂದ ರೈಲುಗಳು ಇನ್ನೂ ನಮ್ಮ ಮೆಟ್ರೋಗೆತ ತಲುಪಿಲ್ಲ. ಟಿಟಾಗರ್ ಸಂಸ್ಥೆ ಡಿಸೆಂಬರ್ ತಿಂಗಳಲ್ಲಿ ಆರು ಬೋಗಿಗಳ ಒಂದು ಸೆಟ್, ಜನವರಿ ತಿಂಗಳಲ್ಲಿ ಮತ್ತೊಂದು ಸೆಟ್ ಅನ್ನು ಬಿಎಂಆರ್ಸಿಎಲ್ಗೆ ಹಸ್ತಾಂತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಆರು ಬೋಗಿಗಳ ಒಂದು ರೈಲಿನ ಮೂಲಕ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಟಿಟಾಗರ್ ಸಂಸ್ಥೆಯಿಂದ ಎರಡು ರೈಲುಗಳು ನಮ್ಮ ಮೆಟ್ರೋ ಸೇರಿದ ಬಳಿಕ, ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ ಈ ಮಾರ್ಗದಲ್ಲಿ ಸುರಕ್ಷತೆಯ ಪರಿಶೀಲನೆ ನಡೆಸಲಿದೆ. ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿಈ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ.
ಆರಂಭದಲ್ಲಿ ಮೂರು ರೈಲುಗಳನ್ನು ಮಾತ್ರ ಓಡಿಸಲು ನಿರ್ಧರಿಸಲಾಗಿದೆ. ಪ್ರತಿ 30 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. 2025ರ ಆಗಸ್ಟ್ ವೇಳೆಗೆ ತಲಾ 6 ಬೋಗಿಯ 15 ರೈಲುಗಳು ಸರಬರಾಜಾಗಲಿವೆ. ಪೂರ್ಣ ಪ್ರಮಾಣದಲ್ಲಿ ರೈಲು ಬೋಗಿಗಳು ಪೂರೈಕೆಯಾದ ಬಳಿಕ ಟ್ರಿಪ್ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಚಾಲಕ ರಹಿತ ಮೆಟ್ರೋ ರೈಲು ಪರೀಕ್ಷಾರ್ಥವಾಗಿ ಸಂಚರಿಸುತ್ತಿದೆ. ರೈಲ್ವೆ ಸುರಕ್ಷತಾ ಮಂಡಳಿಯು ಈಗಾಗಲೇ ಸಿಗ್ನಲಿಂಗ್, ಟ್ರ್ಯಾಕ್ಷನ್ ಮತ್ತು ಬ್ರೇಕಿಂಗ್ ಪರೀಕ್ಷೆಗಳಿಗೆ ತಾಂತ್ರಿಕ ಮಂಜೂರಾತಿ ನೀಡಿದೆ. ಬಹುನಿರೀಕ್ಷಿತ ಆರ್ವಿ ರಸ್ತೆ- ಬೊಮ್ಮಸಂದ್ರ ನಡುವಿನ (ಹಳದಿ ಮಾರ್ಗ) 18.82 ಕಿ.ಮೀ. ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ.
ಟಿಟಾಗರ್ ಸಂಸ್ಥೆ ನಮ್ಮ ಮೆಟ್ರೋಗೆ ಒಟ್ಟು 36 ರೈಲುಗಳನ್ನು ನೀಡಬೇಕಿದ್ದು, ಇದುವರೆಗೆ 6 ಬೋಗಿಗಳಿರುವ ಒಂದು ರೈಲನ್ನ ಮಾತ್ರ ನೀಡಿದೆ. ಇನ್ನುಳಿದ 35 ರೈಲುಗಳ ಪೈಕಿ, ಒಂದನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಬಾಕಿ 34 ರೈಲು ಪಶ್ಚಿಮ ಬಂಗಾಳದ ಘಟಕದಿಂದ ಪೂರೈಕೆಯಾಗಬೇಕು. ಸಂಸ್ಥೆಯು ಪೂರೈಸುವ 216 ಕೋಚ್ಗಳ ಪೈಕಿ, 126 ಕೋಚ್ಗಳನ್ನು ನೇರಳೆ ಮತ್ತು ಹಸಿರು ಮಾರ್ಗಕ್ಕೆ ಮೀಸಲಿಡಲಾಗಿದೆ. 90 ಬೋಗಿಗಳನ್ನು ಹಳದಿ ಮಾರ್ಗಕ್ಕೆ ನಿಗದಿಪಡಿಸಲಾಗಿದೆ.