ಗೆಳೆಯನ ಮದುವೆ ಬಂದೇ ಬಿಡ್ತು. ಇದಕ್ಕಾಗಿ ನವ ಜೋಡಿಗಳಿಗೆ ಸರ್ಪ್ರೈಸ್ ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾನೆ. ವಧು- ವರನಿಗೆ ಗಿಫ್ಟ್ ನೀಡಲು ವೇದಿಕೆ ಹತ್ತಿದ್ದಾನೆ. ನವಜೋಡಿಗಳಿಗೆ ಶುಭ ಹಾರೈಸಿ ಪ್ಯಾಕ್ ಮಾಡಿದ ಗಿಫ್ಟ್ ನೀಡಿದ್ದಾನೆ. ನವಜೋಡಿ ಗಿಫ್ಟ್ ಓಪನ್ ಮಾಡುತ್ತಿದ್ದಂತೆ ಗೆಳೆಯನಿಗೆ ಹೃದಯಾಘಾತವಾಗಿದೆ. ಕುಸಿದ ಗೆಳೆಯನನ್ನು ಇತರರು ಹಿಡಿದು ವಧುವರರ ಸೋಫಾದಲ್ಲಿ ಕೂರಿಸಿದ್ದಾರೆ. ಅಷ್ಟರಲ್ಲೇ ಗೆಳೆಯ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ನಡೆದಿದೆ.
ಆಪ್ತ ಗೆಳೆಯ ಮಂಟಪದ ವೇದಿಕೆಯಲ್ಲೇ ಹೃದಯಾಘಾತಕ್ಕೆ ಬಲಿಯಾಗಿರುವುದು ತೀವ್ರ ಬೇಸರ ತಂದಿದೆ. ಬೆಂಗಳೂರಿನ ಅಮೇಜಾನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ವಂಶಿ ಮೃತ ದುರ್ದೈವಿ. ಸಂಭ್ರಮದಲ್ಲಿದ್ದ ಮಂಟಪದಲ್ಲಿ ಶೋಕ ಆವರಿಸಿತ್ತು.
ಬೆಂಗಳೂರು ಅಮೇಜಾನ್ ಕಚೇರಿ ಉದ್ಯೋಗಿ ವಂಶಿ ತನ್ನ ಆಪ್ತ ಗೆಳೆಯನ ಮದುವೆಗೆ ರಜೆ ಹಾಕಿ ತೆರಳಿದ್ದ. ಕಳೆದ ಒಂದು ತಿಂಗಳಿನಿಂದಲೇ ಈತ ಸಿದ್ಧತೆ ಮಾಡಿಕೊಂಡಿದ್ದ. ಆಪ್ತ ಗೆಳೆಯ ಹಾಗೂ ಆತನ ಪತ್ನಿಯ ಫೋಟೋವನ್ನು ಕೊಲ್ಯಾಜ್ ಮಾಡಿ ಫ್ರೇಮ್ ಹಾಕಿಸಿದ್ದ. ತಾನು ನೀಡುವ ಗಿಫ್ಟ್ ಸ್ಮರಣೀಯವಾಗಿರಬೇಕು ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದ. ಕಚೇರಿಗೆ ಮೊದಲೇ ತಿಳಿಸಿ ರಜೆ ಹಾಕಿದ್ದ ವಂಶಿ, ಮದುವೆಗಾಗಿ ಬೆಂಗಳೂರಿನಿಂದ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಗೆ ಪ್ರಯಾಣಿಸಿದ್ದ.
ರಾತ್ರಿ ಪ್ರಯಾಣ ಮಾಡಿ ಬೆಳಗ್ಗೆ ಪೆನುಮುದಾ ಗ್ರಾಮದಲ್ಲಿ ಆಯೋಜಿಸಿದ್ದ ಗೆಳೆಯನ ಮದುವೆ ಮಂಟಪಕ್ಕೆ ಆಗಮಿಸಿದ್ದ. ಗಿಫ್ಟ್ ಹಿಡಿದು ಆಗಮಿಸಿದ ಗೆಳೆಯನ ನೋಡಿ ವರ ಸಂಭ್ರಮಿಸಿದ್ದ. ಮದುವೆ ಶಾಸ್ತ್ರೋಸಕ್ತವಾಗಿ ನಡೆದಿತ್ತು. ಬಳಿಕ ನವ ಜೋಡಿಗಳನ್ನು ಹಾರೈಸುವ ವೇಳೆ ವೇದಿಕೆ ಹತ್ತಿದ ವಂಶಿ, ಇಬ್ಬರಿಗೂ ಶುಭ ಕೋರಿದ್ದಾನೆ. ಇತ್ತ ವರ ಹೆಮ್ಮೆಯಿಂದ ಗೆಳೆಯನನ್ನು ಪತ್ನಿಗೆ, ಪೋಷಕರಿಗೆ ಪರಿಚಯಿಸಿದ್ದಾನೆ. ಈತ ಬೆಂಗಳೂರಿನಿಂದ ಮದುವೆಗೆ ಆಗಮಿಸಿದ್ದಾನೆ ಎಂದು ಸಂತಸದಿಂದ ಹೇಳಿಕೊಂಡಿದ್ದ.
ವಂಶಿ ನೀಡಿದ್ದ ಗಿಫ್ಟ್ ಪ್ಯಾಕ್ ಓಪನ್ ಮಾಡುವಾಗ ವರನ ಗೆಳೆಯರ ಬಳಗ, ಆಪ್ತರು ಸುತ್ತಲು ನಿಂತಿದ್ದರು. ಎಲ್ಲರಿಗೂ ಗಿಫ್ಟ್ ಏನಿರಬಹುದುದು ಅನ್ನೋ ಕುತೂಹಲ. ಇತ್ತ ವಂಶಿ ಕೂಡ ವೇದಿಕೆಯಲ್ಲೇ ನಿಂತು ನವ ಜೋಡಿ ಗಿಫ್ಟ್ ಪ್ಯಾಕ್ ಓಪನ್ ಮಾಡಲು ಕಾಯುತ್ತಿದ್ದ. ಪ್ಯಾಕ್ ಮಾಡಿದ ಗಿಫ್ಟ್ ಬಿಡಿಸುತ್ತಿದ್ದಂತೆ ವಂಶಿಗೆ ಹೃದಯಾಘಾತವಾಗಿದೆ.
ನವ ಜೋಡಿಗಳ ಪಕ್ಕದಲ್ಲಿ ನಿಂತಿದ್ದವರು ವಂಶಿಯನ್ನು ಹಿಡಿದು ವಧು ವರರ ಸೋಫಾದಲ್ಲಿ ಕೂರಿಸಿದ್ದಾರೆ. ಆರಂಭದಲ್ಲೇ ಪ್ರಯಾಣ ಮಾಡಿದ ಕಾರಣ ಅಸ್ವಸ್ಥನಾಗಿರಬೇಕು ಎಂದುಕೊಂಡಿದ್ದಾರೆ. ಆದರೆ ತಕ್ಷಣವೆ ನೀರು ತರಿಸಿ ಕುಡಿಯಲು ನೀಡಿದ್ದಾರೆ. ಆದರೆ ವಂಶಿಗೆ ಯಾವುದು ಸಾಧ್ಯವಾಗಿಲ್ಲ. ಪರಿಸ್ಥಿತಿ ಗಂಭೀರವಾಗಿದೆ ಎಂದು ಅರಿತ ಆಪ್ತರು ತಕ್ಷಣವೇ ಧೋನ್ ಸಿಟಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸನೆ ನಡೆಸಿದ ವೈದ್ಯರು ವಂಶಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.