ಸ್ಯಾಂಡಲ್ವುಡ್ ಸ್ಟಾರ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಡೆಯಿಂದ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದು ಸಿಕ್ಕಿದೆ. ಹೌದು, ‘ವಿಕ್ರಾಂತ್ ರೋಣಾ’ ಸಿನಿಮಾದ ಬಳಿಕ ಸುದೀಪ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಅವರ ಅಭಿಮಾನಿಗಳಲ್ಲಿ ‘ಮ್ಯಾಕ್ಸ್’ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
ಇದೀಗ ಬಹು ನಿರೀಕ್ಷಿತ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಿಂದ ದೊಡ್ಡ ಅನೌನ್ಸ್ಮೆಂಟ್ಗೆ ದಿನಗಣನೆ ಶುರುವಾಗಿದೆ. ನವೆಂಬರ್ 27ರಂದು ಬಹುನಿರೀಕ್ಷಿತ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಬಹು ಮುಖ್ಯವಾದ ಘೋಷಣೆ ಆಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ‘ವಿ. ಕ್ರಿಯೇಷನ್ಸ್’ ಮೂಲಕ ಕಾಲಿವುಡ್ನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ಧಾನು ಅವರು ‘ಮ್ಯಾಕ್ಸ್’ ಸಿನಿಮಾವನ್ನು ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಟ್ಯಾಕ್ಸ್ ಸಖತ್ ಸದ್ದು ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ಅಲ್ಲದೇ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬಾಲಿವುಡ್ನ ಟಾಪ್ B4U Motion Pictures ಹಕ್ಕುಗಳನ್ನು ಪಡೆದುಕೊಂಡಿದೆ. ಈಗ ರಿಲೀಸ್ ಡೇಟ್ ಬಗ್ಗೆ ಮಾಹಿತಿ ಸಿಗಬಹುದು ಎಂದು ಕಿಚ್ಚ ಸುದೀಪ್ ಅವರ ಫ್ಯಾನ್ಸ್ ನಿರೀಕ್ಷಿಸಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಪಕ್ಕಾ ಮಾಸ್ ಆಕ್ಷನ್ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ಥಾನು, ವಿ ಕ್ರಿಯೇಷನ್ಸ್ ಬ್ಯಾನರ್ ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಬಹುತೇಕ 2025ರ ಯುಗಾದಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.