ಬೆಳಗಾವಿ: ನಮ್ಮ ಭಾರತ ದೇಶದಲ್ಲಿ ಗುರುವಿನ ಮೇಲಿನ ಭಕ್ತಿ ಎಂದಿಗೂ ಕಡಿಮೆಯಾಗುವುದಿಲ್ಲ. ನಮ್ಮ ಭಾರತದಲ್ಲಿ ಮಾತ್ರ ಗುರುಪರಂಪರೆಯನ್ನು ಗುರುತಿಸಿ, ಗೌರವಿಸುತ್ತಾರೆ ಎಂದು ಜ್ಞಾನಪೀಠ ಪುರಸ್ಕೃತ, ನಾಡೋಜ ಡಾ ಚಂದ್ರಶೇಖರ ಕಂಬಾರ ತಿಳಿಸಿದರು.ಘಟಪ್ರಭಾ ಎಸ್ ಡಿ ಟಿ ಹೈಸ್ಕೂಲ್ ನ 95ರ ಹಳೇಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ದೀಪ ಬೆಳಗಿಸಿವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅನ್ನಕ್ಕೆ ದಾರಿ ದೀಪವಾದ ಗುರುಗಳನ್ನು ದೇವರೆಂದು ಭಾವಿಸುತ್ತೇವೆ. ದೇವರಿಗೆ ಸಮನಾದ ಗುರುಗಳನ್ನು 30 ವರ್ಷಗಳ ನಂತರವೂ ತಾವೆಲ್ಲರೂ ಸೇರಿ ನೆನಪಿಸಿಕೊಂಡು ಗೌರವಿಸುತ್ತಿರುವುದೇ ಈ ನೆಲದ ನಾಡಿನ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದರು.ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಬೈಲಹೊಂಗಲ ಎ.ಸಿ.ಪ್ರಭಾವತಿ ಪಕೀರಪೂರ ಅವರು ನಡೆದು ಬಂದ ಹಾದಿ ಮರೆತು ನಡೆಯುವುದು ಆದರ್ಶವಲ್ಲ. ಹಳೇ ವಿದ್ಯಾರ್ಥಿಗಳಿಗೆ ಶಾಲೆ, ಗುರುಗಳ ಮೇಲಿರುವ ಪ್ರೀತಿ ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.
30 ವರ್ಷಗಳ ನಂತರದಲ್ಲಿಯೂ ಕೂಡ ಹಳೆ ವಿದ್ಯಾರ್ಥಿಗಳು ನಮ್ಮ ಶಾಲೆ ಎಂದು ಬಂದು ಈ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ವಿದ್ಯಾರ್ಥಿಗಳ ಸಂಘವನ್ನು ಅಭಿನಂದಿಸಿದ ಶ್ರೀ ಕ್ಷೇತ್ರ ಅರಭಾವಿ ಮಠದ ಗುರುಬಸವಲಿಂಗ ಮಹಾಸ್ವಾಮಿಗಳುಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಈ ಸಂಘದ ಮೂಲಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿ ಸುಗಮವಾಗಲಿ ಎಂದು ಆಶೀರ್ವದಿಸಿದರು.
ಸಂಘದ ಅಧ್ಯಕ್ಷರಾದ ಕೆ ಎಸ್ ನಾಗರಾಜ್ ಮಾತನಾಡಿ ಸಂಘ ಮತ್ತು ಸಂಸ್ಥೆ ಮಠ ಹಾಗೂ ವಿದ್ಯಾರ್ಥಿಗಳ ಶಿಕ್ಷಣ ಆರೋಗ್ಯ ತರಭೇತಿ ಹೀಗೆ ಹಲವಾರು ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿಯ ಕೆಎಸ್ಈಎಸ್ ಅಧಿಕಾರಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಈ ಹೈಸ್ಕೂಲ್ ನಲ್ಲಿ ಕಲಿತು ಉನ್ನತ ಹುದ್ದೆಯಲ್ಲಿರುವ ವಿದ್ಯಾರ್ಥಿಗಳಾದ ಡಾ.ನಾಗರಾಜ್ ಚರಂತಿಮಠ, ವಿದ್ಯಾನಂದ ನಾಯಿಕ, ಭಾಗ್ಯಶ್ರೀ ಪಡೆಪ್ಪಗೋಳ ರವರನ್ನು ನಮ್ಮ ಎಸ್ ಡಿ ಟಿ ಹೈಸ್ಕೂಲ್ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅರ್ಜುನ ಸಂಪಗಾರ, ಗೀತಾ ಬೆನವಾಡಿ, ಶೇಖರ ಬೇಟಗೇರಿ, ಕುಮಾರಯ್ಯ ಕರ್ಪೂರಮಠ, ವಿಜಯಕುಮಾರ್ ಬಡಕುಂದ್ರಿ, ಸಂಜೀವ ನಾಯಿಕ, ಸೋಮಶೇಖರ ಜಿನರಾಳೆ, ಪ್ರಕಾಶ ಮಟಗಾರ, ಜಯಪ್ರಕಾಶ್ ಕಾಡದವರ,ಸುವರ್ಣ ಗಾಡಿವಡ್ಜರ ಮತ್ತು ನಿವೇದಿತಾ ಚರಂತಿಮಠ ಭಾಗವಹಿಸಿದ್ದರು.