ರಾಮನಗರ: ಮಾನವ ಕುಲವೇ ಬೆಚ್ಚಿಬೀಳುವಂಥ ಆಘಾತಕಾರಿ ಕೃತ್ಯವೊಂದು ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಆಗತಾನೆ ಜನಿಸಿರುವ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಲಾಗಿದೆ. ಬುಧವಾರ ರಾತ್ರಿ 10:30 ರ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಅಮಾನವೀಯ ವಿದ್ಯಮಾನ ಇಂದು ಬೆಳಕಿಗೆ ಬಂದಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2 ದಿನದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಹಾರೋಹಳ್ಳಿ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಮಗುವಿನ ತಾಯಿ ಯಾರು.. ಈ ಕೃತ್ಯ ಎಸಗಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.ಟಾಯ್ಲೆಟ್ ನ ಗುಂಡಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆಸ್ಪತ್ರೆ ಸಿಬ್ಬಂದಿಗಳೇ ಹೌಹಾರಿದ್ದಾರೆ. ಟಾಯ್ಲೆಟ್ ಒಳಗೆ ನವಜಾತ ಶಿಶು ಹೇಗೆ ಬಂದಿರಬಹುದು ಯಾವ ತಾಯಿ ಕೂಡ ಹೀಗೆ ಮಾಡಲು ಸಾಧ್ಯವೇ ಎಂದು ಸ್ಥಳದಲ್ಲಿದ್ದವರು ಕಳವಳ ವ್ಯಕ್ತಪಡಿಸಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಶಿಶುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇನ್ನು ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಇನ್ನಷ್ಟು ವಿಚಾರಗಳು ತನಿಖೆಯಿಂದ ತಿಳಿದುಬರಬೇಕಿದೆ.