ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ನಿರತವಾಗಿದ್ದು, ದೇಶದ ಏಳು ಪ್ರಮುಖ ನಗರಗಳಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಈಗಾಗಲೇ ಬಿಹಾರದ ಪಟ್ನಾ, ತಮಿಳುನಾಡಿನ ಚೆನ್ನೈನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಿರುವ ಚಿತ್ರತಂಡ ನಿನ್ನೆ ಕೇರಳದ ಕೊಚ್ಚಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಅಲ್ಲು ಅರ್ಜುನ್ ಚಿತ್ರತಂಡದ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ರಶ್ಮಿಕಾ ಮಂದಣ್ಣ ಅವರನ್ನು ವಿಶೇಷವಾಗಿ ಕೊಂಡಾಡಿದರು.
ಇನ್ನು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಹೈದರಾಬಾದ್ನಿಂದ ವಿಶೇಷ ವಿಮಾನದಲ್ಲಿ ತೆರಳಿದ್ದರು. ಆ ವಿಮಾನದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಗುತ್ತಾ ಮಾತನಾಡುತ್ತಿರುವ ಫೋಟೋವನ್ನು ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಚಿತ್ರದಲ್ಲಿ ರಶ್ಮಿಕಾ ಕೈಗೆ ಬ್ಯಾಂಡೇಜ್ ಹಾಕಲಾಗಿದ್ದು, ಆಕೆಯ ಕೈಗೆ ಏನಾಯಿತು ಎಂದು ಅಭಿಮಾನಿಗಳು ಚಿಂತಿತರಾಗಿದ್ದಾರೆ. ಕೈ ಉಳುಕಾದರೆ ಅಥವಾ ನೋವು ಬಂದರೆ ಮಾತ್ರ ಇಂತಹ ಬ್ಯಾಂಡೇಜ್ನ್ನ ಹಾಕ್ತಾರೆ. ಸದ್ಯಕ್ಕೆ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.
‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಹಲವು ಕನ್ನಡಿಗರು ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಶ್ರೀಲೀಲಾ, ತಾರಕ್ ಪೊನ್ನಪ್ಪ ಅವರುಗಳು ನಟಿಸಿದ್ದಾರೆ. ಸಿನಿಮಾದಲ್ಲಿ ಫಹಾದ್ ಫಾಸಿಲ್, ಸುನಿಲ್, ರಾವ್ ರಮೇಶ್, ಜಗಪತಿ ಬಾಬು ಇನ್ನೂ ಕೆಲವು ಸ್ಟಾರ್ ನಟರು ಸಹ ಇದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದೆ.