ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 60 ರಷ್ಟು ಮತದೊಂದಿಗೆ ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಗೆಲ್ಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ನರೇಂದ್ರ ಮೋದಿ ಸಂದೇಶ, ಅವರ ಕೆಲಸ, ಕಾಂಗ್ರೆಸ್ಸಿನ ಅಭಿವೃದ್ಧಿ ಶೂನ್ಯತೆ ಹಾಗೂ ಭ್ರಷ್ಟಾಚಾರ ಕುರಿತು ಮನೆಮನೆಗೆ ಮಾಹಿತಿ ತಲುಪಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದರು. ಈ ಮೂಲಕ 28ಕ್ಕೆ 28 ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೋರಿದರು. 2014ರಲ್ಲಿ ಬಿಜೆಪಿಗೆ 43 ಶೇ ಮತದೊಂದಿಗೆ 17 ಕ್ಷೇತ್ರ, 2019ರಲ್ಲಿ 51 ಶೇ ಮತದೊಂದಿಗೆ 25 ಕ್ಷೇತ್ರದಲ್ಲಿ ಗೆಲ್ಲಿಸಿದ್ದೀರಿ. ಒಂದೆಡೆ ಪ್ರಧಾನಮಂತ್ರಿ ಮೋದಿಜೀ ಇದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಮತ್ತು ಪ್ರಧಾನಮಂತ್ರಿ ಆಗಿರುವಾಗ ಅವರ ಮೇಲೆ ಭ್ರಷ್ಟಾಚಾರದ ಆರೋಪವೇ ಇರಲಿಲ್ಲ. ಇನ್ನೊಂದೆಡೆ 12 ಲಕ್ಷ ಕೋಟಿಯ ಭ್ರಷ್ಟಚಾರದ ಕೂಟ ಇಂಡಿ ಇದೆ ಎಂದು ಅವರು ಟೀಕಿಸಿದರು. ಕರ್ನಾಟಕದ ಜನರು ಭ್ರಷ್ಟಾಚಾರಿಗಳನ್ನು ಇಷ್ಟಪಡುವುದಿಲ್ಲ. ಕಾಮನ್ವೆಲ್ತ್, 2 ಜಿ, ಸೇಬು ಮಾರಾಟದ ಹಗರಣ, ಮಂತ್ರಿ ನಿವಾಸ ಹಗರಣ, ಜಮ್ಮು- ಕಾಶ್ಮೀರ ಹಗರಣ, ಆಗಸ್ತ ಹೆಲಿಕಾಪ್ಟರ್ ಹಗರಣ ಸೇರಿ 12 ಲಕ್ಷ ಕೋಟಿಯ ಹಗರಣ ಮಾಡಿದವರು ಇಂಡಿ ಕೂಟದಲ್ಲಿದ್ದಾರೆ. ಮೋದಿಯವರು ಒಂದು ಪೈಸೆಯ ಭ್ರಷ್ಟಾಚಾರ ಮಾಡಿಲ್ಲ. ಮೋದಿಯವರೊಂದಿಗೆ ನಾನು 4 ದಶಕದಿಂದ ಕೆಲಸ ಮಾಡುತ್ತಿದ್ದೇನೆ. ಮೋದಿ 2 ದಶಕಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿ- ಪ್ರಧಾನಿಯಾಗಿ ಕೆಲಸ ಮಾಡಿದ್ದು, ಒಂದು ದಿನವೂ ರಜೆ ಪಡೆದಿಲ್ಲ. ರಾಹುಲ್ ಬಾಬಾ ಅವರು ಬೇಸಿಗೆ ಬಂದೊಡನೆ ವಿದೇಶಕ್ಕೆ ತೆರಳುತ್ತಾರೆ ಎಂದು ಟೀಕಿಸಿದರು.