ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಭರ್ಜರಿ ಗೆಲುವು ದೊರೆಯುತ್ತಿದ್ದಂತೆಯೇ ರಾಜ್ಯ ಸಂಪುಟ ಪುನಾರಚನೆಯ ಸುದ್ದಿ ಮುನ್ನೆಲೆಗೆ ಬಂದಿತ್ತು. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ಬವದಂತಿಗಳೂ ಹರಿದಾಡಿದ್ದವು. ಅದಕ್ಕೆ ಪುಷ್ಠಿ ನೀಡುವಂತೆ ರಾಜ್ಯ ನಾಯಕರು ಮಾತನಾಡಿದ್ದರು. ಅತ್ತ ಸಚಿವ ಆಕಾಂಕ್ಷಿಗಳು ಲಾಬಿ ಶುರು ಮಾಡಿದ್ದರು. ಇತ್ತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದರು. ಇನ್ನೇನು ಸಂಪುಟ ಪುನಾರಚನೆ ಆಗುತ್ತದೆ ಎಂದು ಆಸೆಯಿಂದ ಕಾಯುತ್ತಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಟ್ಟಿದೆ.
ದೆಹಲಿಯಲ್ಲಿ ಗುರುವಾರ ಹೈಕಮಾಂಡ್ ಮಟ್ಟದ ನಾಯಕರು ಸಭೆ ನಡೆಸಿದರು. ಸಂಪುಟ ಪುನಾರಚನೆಗೆ ಸದ್ಯದ ಪರಿಸ್ಥಿತಿ ಪಕ್ವವಾಗಿಲ್ಲ ಎಂಬ ಸಂದೇಶವನ್ನು ಈ ಸಭೆ ರವಾನಿಸಿದೆ. ಕರ್ನಾಟಕದಲ್ಲಿ ಸದ್ಯಕ್ಕೆ ಸಂಪುಟ ಪುನಾರಚನೆ ಬೇಡ ಎಂದು ಹೈಕಮಾಂಡ್ ಹೇಳಿದೆ. ಉಳಿದಂತೆ ಖಾಲಿ ಉಳಿದಿರುವ ಸ್ಥಾನಗಳನ್ನು ತುಂಬಲು ಹಸಿರು ನಿಶಾನೆ ತೋರಿದೆ. ಬಿ. ನಾಗೇಂದ್ರರಿಂದ ತೆರವಾದ ಸ್ಥಾನಕ್ಕೆ ಭರ್ತಿಗೆ ಸೂಚಿಸಲಾಗಿದೆ. ಕೆಲವು ಸಚಿವರು ತಮ್ಮ ಖಾತೆ ನಿಭಾಯಿಸಲು ವಿಫಲರಾಗಿದ್ದು, ಅಂತಹ ಸಚಿವರ ಖಾತೆ ಅದಲು ಬದಲಾಗುವ ಸಾಧ್ಯತೆ ಇದೆ. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ನಿರುತ್ಸಾಹ ತೋರಿದೆ. ಈಗ ಸ್ಥಾನ ಬದಲಾಯಿಸಿದರೆ ತಪ್ಪು ಸಂದೇಶ ರವಾನೆ ಸಾಧ್ಯತೆ ಇದೆ ಎಂಬುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.