ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಗೆಲುವು ದಾಖಲಿಸುವ ಆರ್ಸಿಬಿಯ ಆಸೆ, ನಿರಾಸೆಯಾಗಿಯೇ ಉಳಿದಿದೆ. ತವರಿನಲ್ಲಿ ಆರ್ಸಿಬಿ ಹೀನಾಯ ಪ್ರದರ್ಶನವನ್ನು ಮುಂದುವರೆಸಿದ್ದು, ಆರ್ ಸಿಬಿ ಫ್ಯಾನ್ಸ್ ಆಕ್ರೋಶಕ್ಕೂ ಕಾರಣವಾಗಿದೆ. ದುಬಾರಿ ಬೆಲೆಗೆ ಖರೀದಿಸಿದ ಸ್ಟಾರ್ ಆಟಗಾರರೇ ಈಗ ಚಿಂತೆಗೆ ಕಾರಣವಾಗಿದ್ದಾರೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ 28 ರನ್ ಸೋಲು ಕಂಡಿದೆ. ಈ ಸೋಲು ನಿಜಕ್ಕೂ ಆರ್ಸಿಬಿ ತಂಡದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಸಹ ಇನ್ನು ಒನ್ ಮ್ಯಾನ್ ಶೋ ನಡೆಯುತ್ತಲೇ ಇದೆ. ಪ್ರದರ್ಶನ ನೀಡದೆ ಆಟಗಾರರು ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಅಬ್ಬರಿಸಿತು. ಈ ವೇಳೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆ.ಎಲ್. ರಾಹುಲ್ 20 ರನ್ ಗಳಿಸಿ ಔಟ್ ಆದರೆ, ಬಳಿಕ ದೇವದತ್ ಪಡಿಕ್ಕಲ್ 6 ರನ್ ಗಳಿಸಿ ಪೆವೆಲಿಯನ್ ಸೇರಿದರು. ಆದರೆ ಕ್ವಿಂಟನ್ ಡಿಕಾಕ್ ಮಾತ್ರ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದರು. ಈ ವೇಳೆ ಡಿಕಾಕ್ 56 ಎಸೆತದಲ್ಲಿ 5 ಸಿಕ್ಸ್ ಮತ್ತು 8 ಫೋರ್ ಮೂಲಕ 81 ರನ್ ಸಿಡಿಸಿ ಔಟ್ ಆದರು. ಆದರೆ ಕೊನೆಯಲ್ಲಿ ನಿಕೋಲಸ್ ಪೂರನ್ ವಿಶ್ವರೂಪ ತಾಳಿದರು. ಪೂರನ್ 21 ಎಸೆತದಲ್ಲಿ 5 ಸಿಕ್ಸ್ ಮತ್ತು 1 ಬೌಂಡರಿ ಮೂಲಕ 40 ರನ್ ಗಳಿಸುವ ಮೂಲಕ ಸ್ಕೋರ್ ಬೋರ್ಡ್ ಹೆಚ್ಚಿಸಿದರು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕ ಮತ್ತು ಪೂರನ್ ಅವರ ಅದ್ಭುತ ಶಕ್ತಿಯ ಪ್ರದರ್ಶನದಿಂದಾಗಿ ಎಲ್ಎಸ್ಜಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
ಲಖನೌ ನೀಡಿದ 182 ರನ್ ಚೇಸಿಂಗ್ಗಿಳಿದ ಆರ್ಸಿಬಿ ಉತ್ತಮ ಆರಂಭ ಪಡೆಯಿತು. ಅನುಭವಿಗಳಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಆರಂಭ ಕೊಟ್ಟರು. 22 ರನ್ ಗಳಿಸಿ ವಿರಾಟ್, ಪದಾರ್ಪಣೆ ಮಾಡಿದ ಆಟಗಾರ ಸಿದ್ಧಾರ್ಥ್ಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಔಟಾದ ಬೆನ್ನಲ್ಲೇ 19 ರನ್ ಗಳಿಸಿದ್ದ ಫಾಫ್ ರನೌಟ್ ಆದರು. ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯದಲ್ಲಿ ವಿಫಲರಾದ ಗ್ಲೆನ್ ಮ್ಯಾಕ್ಸ್ವೆಲ್ ಡಕೌಟ್ ಆದರು. ಅವರ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ ಕೂಡಾ 9 ರನ್ ಗಳಿಸಿದ್ದಾಗ ಔಟಾದರು. ಸತತ ಎರಡು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಮಯಾಂಕ್ ಯಾದವ್ ಮುನ್ನಡೆ ತಂದುಕೊಟ್ಟರು. ತಂಡ ಮೇಲಿಂದ ಮೇಲೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ, ರಜತ್ ಪಾಟೀದಾರ್ ಮತ್ತು ಅನುಜ್ ರಾವತ್ ಕೆಲಕಾಲ ಕ್ರೀಸ್ಕಚ್ಚಿ ಆಡಿದರು. ರಾವತ್ 11 ರನ್ ಗಳಿಸಿದರೆ, 29 ರನ್ ಗಳಿಸಿ ಪಾಟೀದಾರ್ ಕೂಡಾ ಪೆವಿಲಿಯನ್ ಸೇರಿದರು. ಡೆತ್ ಓವರ್ಗಳಲ್ಲಿ ದಿನೇಶ್ ಕಾರ್ತಿಕ್ ಜೊತೆಗೂಡಿದ ಮಹಿಪಾಲ್ ಲೋಮ್ರರ್ ತಂಡವನ್ನು ಗೆಲ್ಲಿಸುವ ಪ್ರಯತ್ನಕ್ಕೆ ಮುಂದಾದರು. ಡಿಕೆ 4 ರನ್ ಗಳಿಸಿ ಔಟಾದರೆ, ಅಬ್ಬರಿಸಿದ ಲೋಮ್ರರ್ ಕೇವಲ 13 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ಗಳೊಂದಿಗೆ 33 ರನ್ ಕಲೆ ಹಾಕಿದರು. ಪೂರನ್ಗೆ ಕ್ಯಾಚ್ ನೀಡಿ ಔಟಾಗುವುದರೊಂದಿಗೆ ತಂಡದ ಸೋಲು ಖಚಿತವಾಯ್ತು. ಕೊನೆಗೆ 153 ರನ್ಗೆ ತಂಡ ಆಲೌಟ್ ಆಯ್ತು. ಪ್ರಸಕ್ತ ಆವೃತ್ತಿಯಲ್ಲಿ ತಂಡವೊoದು ಆಲೌಟ್ ಆದ ಮೊದಲ ನಿದರ್ಶನವಿದು. ಈ ಪಂದ್ಯದಲ್ಲೂ ಅಬ್ಬರಿಸಿದ ಲಖನೌನ ಮಯಾಂಕ್, ಒಟ್ಟು ಮೂರು ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.