ಲಂಡನ್: ಕರ್ನಾಟಕದ ಕೈಗಾರಿಕಾ ಮತ್ತು ನವೀಕರಿಸಬಹುದಾದ ಇಂಧನ ವಲಯಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಹೀರೊ ಫ್ಯೂಚರ್ ಎನರ್ಜೀಸ್ ಪ್ರೈವೇಟ್ ಲಿಮಿಟೆಡ್ (ಎಚ್ಎಫ್ಇಪಿಎಲ್) ಇಲ್ಲಿ ಕರ್ನಾಟಕ ಸರ್ಕಾರದ ಜೊತೆಗೆ ₹ 11,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಸಿದ್ಧತೆ ಅಂಗವಾಗಿ ಲಂಡನ್ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ರೋಡ್ ಷೋದಲ್ಲಿ ಈ ಒಪ್ಪಂದ ಕಾರ್ಯಗತಗೊಂಡಿದೆ.
ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ₹11,000 ಕೋಟಿ ಬಳಕೆ ಆಗಲಿದೆ. ಎಚ್ಎಫ್ಇಪಿಎಲ್- ನ ಈ ಪ್ರಸ್ತಾವಿತ ಯೋಜನೆಗಳು ರಾಜ್ಯದಲ್ಲಿ 2025-26 ರಿಂದ ಕಾರ್ಯಾರಂಭಗೊಳ್ಳಲಿವೆ. 2 ರಿಂದ 3 ವರ್ಷಗಳಲ್ಲಿ ಈ ಮೊತ್ತದ ಹೂಡಿಕೆ ಆಗಲಿದೆ. ಈ ಒಪ್ಪಂದದ ಫಲವಾಗಿ ಕರ್ನಾಟಕದಲ್ಲಿ ಸುಮಾರು 3,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಪರಿಸರ ಸ್ನೇಹಿ ಇಂಧನ ಪರಿಹಾರ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆ ಸಾಧಿಸಲು ರಾಜ್ಯವು ಮುಂಚೂಣಿಯಲ್ಲಿ ಇರುವುದನ್ನು ಮತ್ತು ಬಂಡವಾಳ ಹೂಡಿಕೆಯ ಆದ್ಯತಾ ತಾಣವಾಗಿರುವುದಕ್ಕೆ ಈ ಒಪ್ಪಂದವು ಇನ್ನೊಂದು ನಿದರ್ಶನವಾಗಿದೆ. ಕಾಲಮಿತಿ ಒಳಗೆ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಗತ್ಯವಾದ ಉತ್ತೇಜನಾ ಕ್ರಮಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ’ ಎಂದು ಸಚಿವರು ಹೇಳಿದ್ದಾರೆ.
ಸಚಿವ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ಮತ್ತು ಹೀರೊ ಫ್ಯೂಚರ್ ಎನರ್ಜಿಯ ಮುಖ್ಯ ಹಣಕಾಸು ಅಧಿಕಾರಿ ಬೆಂಜಮಿನ್ ಪೌಲ್ ಪ್ರೇಸರ್ ಅವರು ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಹೊಸ ತಲೆಮಾರಿನ ಇಂಧನಗಳಿಗಾಗಿ ಅಸಾಮಾನ್ಯ ಸ್ವರೂಪದ ಹವಾಮಾನ ಸವಾಲುಗಳು ದಿಟ್ಟ ಹಾಗೂ ದೃಢ ನಿರ್ಧಾರದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇರುವುದನ್ನು ಹೀರೊ ಫ್ಯೂಚರ್ ಎನರ್ಜೀಸ್ ಗುರುತಿಸಿದೆ. 6ಕ್ಕೂ ಹೆಚ್ಚು ಗಿಗಾವಾಟ್ನಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯದೊಂದಿಗೆ ನಾವು ಮಾಲಿನ್ಯ ತಗ್ಗಿಸುವ ನಮ್ಮ ಪ್ರಯತ್ನಗಳನ್ನು ಸಾರಿಗೆ ಮತ್ತು ಭಾರಿ ಎಂಜಿನಿಯರಿಂಗ್ ತಯಾರಿಕೆಯಂತಹ ಕೈಗಾರಿಕೆಗಳಿಗೆ ವಿಸ್ತರಿಸುತ್ತಿದ್ದೇವೆʼ ಎಂದು ಕಂಪನಿಯ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ತಿಳಿಸಿದ್ದಾರೆ.
ಎಚ್ಎಫ್ಇಪಿಎಲ್ ಅನ್ನು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿರುವ ರಾಹುಲ್ ಮುಂಜಾಲ್ ಅವರು 2012 ರಲ್ಲಿ ಸ್ಥಾಪಿಸಿದ್ದಾರೆ. ಇದು ಹೀರೊ ಗ್ರೂಪ್ನ ಭಾಗವಾಗಿದೆ.ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.