ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕುರಿತು ಚರ್ಚೆಗೆ ಒತ್ತಾಯಿಸಿ ಪಂಜಾಬ್ನ ರೈತರು ಈ ವಾರ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದು ಇದರ ನಡುವೆ ಭಾರತೀಯ ಕಿಸಾನ್ ಪರಿಷತ್ ನೇತೃತ್ವದ ರೈತರ ಮೊದಲ ಗುಂಪು ಇಂದು ತಮ್ಮ ಮೆರವಣಿಗೆಯನ್ನು ಪ್ರಾರಂಭಿಸುವುದಾಗಿ ಹೇಳಿಕೊಂಡಿದೆ, ಇನ್ನು ಪ್ರತಿಭಟನಾ ಮೆರವಣಿಗೆ ನಡೆಯುವ ಮೊದಲೇ ನೋಯ್ಡಾ – ದೆಹಲಿ ಗಡಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಭಾರತೀಯ ಕಿಸಾನ್ ಪರಿಷತ್ ಸೋಮವಾರ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದು ಈ ನಡುವೆ ಪೊಲೀಸರು ರಸ್ತೆಯಲ್ಲಿ ಬ್ಯಾರಿಕೇಡ್ ಇಟ್ಟು ವಾಹನಗಳನ್ನು ಪರಿಶೀಲನೆ ನಡೆಸಿ ಬಿಡುತ್ತಿರುವುದರಿಂದ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಅಲ್ಲದೆ ಟ್ರಾಫಿಕ್ ಜಾಮ್ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ರೈತರ ಪ್ರತಿಭಟನೆ ಹಿನ್ನೆಲೆ ನೊಯ್ದಾದಿಂದ ದೆಹಲಿಗೆ ಬರುವ ವಾಹನ ಸವಾರರಿಗೆ ಈಗಾಗಲೇ ಪೊಲೀಸರು ಸಲಹೆ ನೀಡಿದ್ದು, ವಾಹನ ಸವಾರರು ಅನಗತ್ಯವಾಗಿ ಈ ಮಾರ್ಗದಲ್ಲಿ ಸಂಚರಿಸದಂತೆ ಸಲಹೆ ನೀಡಿದ್ದು ಅಲ್ಲದೆ ವಾಹನಗಳ ಬದಲಿಗೆ ಮೆಟ್ರೋ ರೈಲುಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.
ಪ್ರತಿಭಟನಾ ನಿರತ ರೈತರು ಸೋಮವಾರ ಮಧ್ಯಾಹ್ನ ನೋಯ್ದಾದ ಮಹಾ ಮಾಯಾ ಮೇಲೇತುವೆಯಿಂದ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟು ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜೂರ್ ಮೋರ್ಚಾ (ಕೆಎಂಎಂ) ನೇತೃತ್ವದಲ್ಲಿ ಕಳೆದ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು ರೈತರನ್ನು ದೆಹಲಿಗೆ ಪ್ರವೇಶಿಸದಂತೆ ಭದ್ರತಾ ಪಡೆಗಳಿಂದ ನಿರ್ಬಂಧಿಸಲಾಗಿದೆ. ಡಿಸೆಂಬರ್ 6 ರಿಂದ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮೆರವಣಿಗೆ ನಡೆಯಲಿದ್ದು, ಹೆಚ್ಚಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.