ಕನ್ನಡದ ಖ್ಯಾತ ನಟಿ ಲೀಲಾವತಿ ಡಿಸೆಂಬರ್ 8, 2023ರಲ್ಲಿ ನಿಧನರಾದ್ರು. ಲೀಲಾವತಿ ನಿಧನರಾಗಿ ಒಂದು ವರ್ಷ ಆಗ್ತಿದ್ದು, ಅಮ್ಮನಿಗಾಗಿ ಮಗ ವಿನೋದ್ ರಾಜ್ಕುಮಾರ್ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಅಮ್ಮ–ಮಗ ಅಂದ್ರೆ ಲೀಲಾವತಿ–ವಿನೋದ್ ರಾಜ್ ಎನ್ನುವಷ್ಟು ಇಬ್ಬರೂ ಸದಾ ಜೊತೆಯಲ್ಲಿರುತ್ತಿದ್ರು. ಅಮ್ಮನನ್ನು ಕಳೆದುಕೊಂಡ ವಿನೋದ್ ರಾಜ್ ಒಬ್ಬಂಟಿಯಾಗಿದ್ದಾರೆ. ಅಮ್ಮನ ನೆನಪಿಗಾಗಿ ತಾಯಿಯ ಸ್ಮಾರಕ ಕಟ್ಟಿದ್ದಾರೆ. ಡಿ.5 ರಂದು ಸ್ಮಾರಕ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರಿಗೆ ವಿಡಿಯೋ ಮೂಲಕ ಆಹ್ವಾನ ನೀಡಿದ್ದಾರೆ.
ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ನಟ ವಿನೋದ್ ರಾಜ್ ಅಮ್ಮ ಲೀಲಾವತಿ ಅವರಿಗಾಗಿ 1 ಕೋಟಿ ಖರ್ಚು ಮಾಡಿ ಲೀಲಾವತಿಯವರ ಅಪರೂಪದ ಚಿತ್ರ ಸಂಪುಟಗಳ ಕಲಾತ್ಮಕವಾದ ಭವ್ಯ ಮಂದಿರ (ಸಮಾಧಿ) ನಿರ್ಮಾಣಗೊಂಡಿದೆ. ‘ಒಳ ಆವರಣದ ಸುತ್ತಲೂ ಅಪರೂಪದ 62 ಚಿತ್ರಪಟಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಅಮ್ಮನ ಆಸೆಯಂತೆ ಚಿಕ್ಕ ರಂಗಮಂದಿರ ನಿರ್ಮಿಸಲಾಗಿದೆ. ಸಣ್ಣ ಸಣ್ಣ ರಂಗ ಪ್ರದರ್ಶನಗಳು, ಸಭೆ ಸಮಾರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಲೀಲಾವತಿ ಅವರ ಪುತ್ರ, ನಟ ವಿನೋದ್ರಾಜ್ ಮಾಹಿತಿ ನೀಡಿದರು.
ನೆಲಮಂಗಲ ಪಟ್ಟಣದಿಂದ ಸುಮಾರು 8 ಕಿ.ಮೀ. ದೂರದಲ್ಲಿ ಪ್ರಕೃತಿ ಮಡಿಲಲ್ಲಿ ಮಂದಿರವಿರುವುದರಿಂದ ನಿತ್ಯ ಮಂದಿರ ವೀಕ್ಷಣೆಗೆ ಬರುವವರಿಗಾಗಿ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮಂದಿರ ತೆರೆದಿರುತ್ತದೆ. ಸುಸಜ್ಜಿತ ಪಾಕಶಾಲೆ, ಭೋಜನಾಲಯವಿದೆ. ಅಭಿಮಾನದಿಂದ ಅಮ್ಮನ ಮಡಿಲಲ್ಲಿ ಒಂದೆರಡು ದಿನ ಕಳೆಯಬೇಕೆನ್ನುವವರಿಗೆ ವಸತಿ ವ್ಯವಸ್ಥೆಗಾಗಿ ಸುಸಜ್ಜಿತ ಎರಡು ಕೊಠಡಿಗಳನ್ನು ಹಾಗೂ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಲೀಲಾವತಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದರು. ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000ದ ಸಾಲಿನಲ್ಲಿ ಲೀಲಾವತಿಗೆ ನೀಡಲಾಗಿದೆ. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಲಾಯ್ತು.
ಲೀಲಾವತಿ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗ್ಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ, ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು.
ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇದೀಗ ವಿನೋದ್ ರಾಜ್ ತಾಯಿ ಕಳೆದುಕೊಂಡು ಒಬ್ಬಂಟಿಯಾಗಿದ್ದಾರೆ.