ಬಿಜೆಪಿಯಲ್ಲಿ ಬಣ ರಾಜಕೀಯದ ಸದ್ದು ಜೋರಾಗಿ ಕೇಳ್ತಿದ್ರೆ, ಇತ್ತ ಕಾಂಗ್ರೆಸ್ ನಲ್ಲಿಯೂ ಕೂಡ ಶೀತಲ ಸಮರ ಜೋರಾಗಿಯೇ ನಡೆಯುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿಲ್ಲ. ಇದರ ನಡುವೆಯೇ ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯ ಗೆಲುವು ಕಾಂಗ್ರೆಸ್ ಗೆ ಶಕ್ತಿ ತಂದು ಕೊಟ್ಟಿದ್ದರೆ, ಇದೇ ಗೆಲುವು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕುರ್ಚಿ ಕಾಳಗಕ್ಕೆ ನಾಂದಿ ಹಾಡಿದೆ.
ಸಿಎಂ ಪಟ್ಟಕ್ಕಾಗಿ ರೇಸ್ ನಲ್ಲಿ ಕೆಲವು ನಾಯಕರು ಕೂಡ ಈಗಾಗಲೇ ಹೈಕಮಾಂಡ್ ಕದ ತಟ್ಟಿದ್ದಾರೆ. ಸದ್ಯ ಕಾಂಗ್ರೆಸ್ ನಲ್ಲಿಯೂ ಎಲ್ಲವೂ ಸರಿಯಿಲ್ಲ ಅನ್ನೋದು ಹೊರಬಿದ್ದಿದೆ. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಪಟ್ಟದ ಆಸೆ ಬಿಚ್ಚಿಟ್ಟಿದ್ದಾರೆ. ಎರಡೂವರೆ ವರ್ಷದ ಬಳಿಕ ಸಿಎಂ ಪಟ್ಟ ಸಿಗುವ ಕನಸು ಕಾಣ್ತಿರುವ ಡಿಕೆ ಶಿವಕುಮಾರ್, ಪವರ್ ಶೇರಿಂಗ್ ಹಾಗೂ ಹೈಕಮಾಂಡ್ ಒಪ್ಪಂದದ ಬಗ್ಗೆ ಮಾತನಾಡಿದ್ದರು.
ಆದರೆ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿರೋ ಸಿಎಂ ಸಿದ್ದರಾಮಯ್ಯ ಯಾವ ಒಪ್ಪಂದ ಇಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಫೈನಲ್ ಎಂದು ಟಾಂಗ್ ನೀಡಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಕೂಡ ಸಿಎಂ ಅವರು ಹೇಳಿದ್ದೇ ಫೈನಲ್.. ಐ ಆಮ್ ಆಲ್ ವೇಸ್ ಲಾಯಲ್ ಟು ದಿ ಚೇರ್, ಲಾಯಲ್ ಟು ದಿ ಪಾರ್ಟಿ ಎನ್ನುವ ಮೂಲಕ ಸಿಎಂ ಪಟ್ಟದ ಫೈಟ್ಗೆ ಬ್ರೇಕ್ ಹಾಕೋಕೆ ಮುಂದಾಗಿದ್ದಾರೆ.