ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಬೆಂಗಳೂರಿಗೂ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಹಲವು ಪ್ರದೇಶಗಳಲ್ಲಿ ನೀರು ಪೂರೈಸಲು ಸರ್ಕಾರ ಟ್ಯಾಂಕರ್ ಗಳ ಮೊರೆ ಹೋಗಿದೆ. ಈ ಮಧ್ಯೆ ತಮಿಳುನಾಡು ಸರ್ಕಾರ ಮತ್ತೆ ಕಾವೇರಿ ತಗಾದೆ ತೆಗೆದಿದೆ. ಮಳೆ ಕೈಕೊಟ್ಟ ಹಿನ್ನೆಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯ ಭರ್ತಿಯಾಗದೇ ಕುಡಿಯುವ ನೀರಿಗೂ ಸಂಕಷ್ಟದ ಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಬಾಕಿ ಇರುವ 3.6 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಸಿಡಬ್ಲ್ಯೂಎಂಎ ಮೊರೆ ಹೋಗಿತ್ತು. ಇದಕ್ಕೆ ಸಭೆಯಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು, ರಾಜ್ಯದ ವಾಸ್ತವ ಸ್ಥಿತಿಯನ್ನ ಮನವರಿಕೆ ಮಾಡಕೊಟ್ಟಿದ್ದರು. ವಾದ ಪ್ರತಿವಾದ ಆಳಿಸಿದ ಸಿಡಬ್ಲ್ಯೂಎಂಎ, ತಮಿಳುನಾಡು ಬೇಡಿಕೆಯನ್ನ ಸಾರಸಗಟಾಗಿ ತಿರಸ್ಕರಿಸಿದೆ. ಕರ್ನಾಟಕವು ಫೆಬ್ರವರಿ ತಿಂಗಳವರಗೆ 2.5tmcft ಪರಿಸರ ಹರಿವನ್ನು ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿರುವ ಜೊತೆಗೆ, ಕರ್ನಾಟಕದ ನಗರಗಳಲ್ಲಿ ಪ್ರಸ್ತುತ ನೀರಿನ ಬಿಕ್ಕಟ್ಟು ತೀವ್ರವಾಗಿದ್ದು, ಅದಕ್ಕೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಸಿಡಬ್ಲ್ಯೂಎಂಎ ಕಾರ್ಯದರ್ಶಿ ಟಿಡಿ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.