ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಡಿ. 8 ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳಿಗೆ ಭಾನುವಾರ ಪರೀಕ್ಷೆ ನಡೆಸಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ವೈಷ್ಣವಿ ಕೋರಿಕೆ ಮೇರೆಗೆ ಮೆಟ್ರೋ ರೈಲುಗಳನ್ನು ಬೆಳಗ್ಗೆ 7ಗಂಟೆ ಬದಲಾಗಿ 5.30ಕ್ಕೆ ಆರಂಭಿಸಲಾಗುತ್ತಿದೆ.
ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಮೆಟ್ರೋ ಸೇವೆ ಬೆಳಗ್ಗೆ 7 ಗಂಟೆಯ ಬದಲಾಗಿ ಬೆಳಗ್ಗೆ 5:30ಕ್ಕೆ ಎಲ್ಲಾ ನಾಲ್ಕು ಟರ್ಮಿನಲ್ ನಿಲ್ದಾಣಗಳಾದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣದಿಂದ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜಿಸ್ಟಿಕ್ನಿಂದ ಎಲ್ಲ ನಾಲ್ಕು ದಿಕ್ಕಿಗೆ ಮೊದಲ ರೈಲು ಬೆಳಗ್ಗೆ 5.30 ಗಂಟೆಗೆ ಹೊರಡಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.ಈ ಅವಧಿಯಲ್ಲಿ ಬೆಳಗ್ಗೆ 5.30 ರಿಂದ 7 ಗಂಟೆಯವರೆಗೆ ರೈಲುಗಳು 30 ನಿಮಿಷಗಳ ಆವರ್ತನದಲ್ಲಿ ಚಲಿಸಲಿವೆ. ಬೆಳಗ್ಗೆ 7 ಗಂಟೆಯ ಬಳಿಕ ಎಂದಿನಂತೆ ರೈಲುಗಳು ಚಲಿಸುತ್ತವೆ.
ಜನತೆ ಹಾಗೂ ಪರೀಕ್ಷೆಗೆ ಹೋಗುವ ಅಭ್ಯರ್ಥಿಗಳು ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಕೋರಲಾಗಿದೆ. ನಗದು ರಹಿತ ಟಿಕೆಟ್ ಪಡೆಯಲು ಮೆಟ್ರೋ ನಿಗಮವು ಹೆಚ್ಚಾಗಿ ಕ್ಯೂಆರ್ ಟಿಕೆಟ್ ಮೂಲಕ ಟಿಕೆಟ್ ಖರೀದಿಸಲು ಕೋರಿದೆ.