ಒಂದ್ಕಡೆ ಪುಷ್ಪ-2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 294 ಕೋಟಿ ಗಳಿಕೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಮತ್ತೊಂದ್ಕಡೆ ಪುಷ್ಪ 2 ಚಿತ್ರದ ವೀಕ್ಷಣೆ ವೇಳೆ ಅಲ್ಲು ಅರ್ಜುನ್ ಎಂಟ್ರಿಯಿಂದಾಗಿ ಮಹಿಳೆಯೋರ್ವಳು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಅದಕ್ಕೆ ಸಂತಾಪ ಸೂಚಿಸಿರೋ ನಟ, 25 ಲಕ್ಷ ರೂಪಾಯಿ ಪರಿಹಾರ ಕೂಡ ಮೃತಳ ಕುಟುಂಬಕ್ಕೆ ನೀಡೋದಾಗಿ ಅನೌನ್ಸ್ ಮಾಡಿದ್ದಾರೆ. ಹೀಗೆ ಸಿಹಿ ಹಾಗೂ ಕಹಿ ಘಟನೆಗಳ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ಆಗ್ತಿದೆ. ಅದೇ ಅಲ್ಲು ಅರ್ಜುನ್ ವರ್ಸಸ್ ಮೆಗಾ ಫ್ಯಾಮಿಲಿ.
ಹೌದು.. ನಟ ಅಲ್ಲು ಅರ್ಜುನ್ ಕೂಡ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಸ್ಟಾರ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಷಯವೇ. ಆದ್ರೆ ಇತ್ತೀಚೆಗೆ ಅದ್ಯಾಕೋ ಅಲ್ಲು ಅರ್ಜುನ್ ಹಾಗೂ ಮೆಗಾ ಫ್ಯಾಮಿಲಿ ನಡುವೆ ಅಷ್ಟಕ್ಕಷ್ಟೇ ಅನ್ನೋದು ಎದ್ದು ಕಾಣ್ತಿದೆ. ಅದಕ್ಕೆ ಕಾರಣವಾಗಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ರ ಜನಸೇನಾ ಪಕ್ಷದ ಅಭ್ಯರ್ಥಿ ವಿರುದ್ದ ನಿಂತಿದ್ದ ಜಗನ್ ಮೋಹನ್ ರೆಡ್ಡಿಯ YSRCP ಕ್ಯಾಂಡಿಡೇಟ್ ರವಿಚಂದ್ರ ಕಿಶೋರ್ ರೆಡ್ಡಿ ಪರ ಅಲ್ಲು ಅರ್ಜುನ್ ಎಲೆಕ್ಷನ್ ಕ್ಯಾಂಪೇನ್ ಮಾಡಿದ್ದು. ಅಲ್ಲದೆ, ಇತ್ತೀಚೆಗೆ ನಡೆದ ಪುಷ್ಪ ಪ್ರೀ ರಿಲೀಸ್ ಇವೆಂಟ್ ನಲ್ಲಿ ಮೆಗಾ ಫ್ಯಾಮಿಲಿ ಫ್ಯಾನ್ಸ್ ನ ಮರೆತು ಬರೀ ‘ನನ್ನ ಫ್ಯಾನ್ಸ್, ನನ್ನ ಆರ್ಮಿ’ ಅಂತೆಲ್ಲಾ ಅಲ್ಲು ಅರ್ಜುನ್ ಮಾತನಾಡಿರೋದು.
ಇದೀಗ ಅದನ್ನೇ ಬಂಡವಾಳ ಆಗಿಸಿಕೊಂಡಿರೋ ಜಗನ್ ಪಕ್ಷ, ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕಾರ್ಯ ಮಾಡ್ತಿದೆ. ಪುಷ್ಪ ಚಿತ್ರದಲ್ಲಿ ಇಲ್ಲದಿರೋ ಡೈಲಾಗ್ ನ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದೆ. ‘ಯಾರೋ ಬಾಸ್..? ಯಾರಿಗೋ ಬಾಸ್..? ಆತನಿಗೆ, ಆತನ ಮಗನಿಗೆ, ಆತ ತಮ್ಮನಿಗೂ ಕೂಡ ನಾನೇ ಬಾಸ್’ ಅನ್ನೋ ಪದಗಳುಳ್ಳ ಫೇಕ್ ಡೈಲಾಗ್ ನ ವೈರಲ್ ಮಾಡಿ, ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಪವನ್ ಕಲ್ಯಾಣ್ ವಿರುದ್ಧ ಜಗನ್ ಪಕ್ಷಕ್ಕೆ ಅಲ್ಲು ಅರ್ಜುನ್ ನ ಸೆಳೆಯೋ ಹುನ್ನಾರ ಕೂಡ ನಡೆಸುತ್ತಿದೆ.
ಯೆಸ್.. ಚಿರಂಜೀವಿ, ಪವನ್ ಕಲ್ಯಾಣ್, ರಾಂ್ ಚರಣ್ ಹಾಗೂ ಜನಸೇನಾ ಪಕ್ಷಗಳ ವಿರುದ್ಧ YSRCP ಮತ್ತೆ ಜಗನ್ ಮೋಹನ್ ರೆಡ್ಡಿ ಸಂಚು ರೂಪಿಸಲು ಮುಂದಾಗಿದ್ದಾರೆ. ಅದಕ್ಕೆ ಅಲ್ಲು ಅರ್ಜುನ್ ನ ಬಳಸಿಕೊಂಡು ತನ್ನ ಸೇಡು ತೀರಿಸಿಕೊಳ್ಳಲು ಮುಂದಾಗ್ತಿರೋದು ಎದ್ದು ಕಾಣ್ತಿದೆ. ಈ ವಿಷಯ ಸದ್ಯ ಆಂಧ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಹೀಗೆಯೇ ಮುಂದುವರೆದರೆ ಈ ಹಿಂದೆ ಚಿರು- ಬಾಲಯ್ಯನ ಫ್ಯಾನ್ಸ್ ಬಡಿದಾಡಿಕೊಳ್ತಿದ್ದ ಹಾಗೆ ಅಲ್ಲು ಅರ್ಜುನ್ ಹಾಗೂ ಮೆಗಾ ಫ್ಯಾಮಿಲಿ ಸ್ಟಾರ್ ಗಳ ಫ್ಯಾನ್ಸ್ ನಡುವೆ ದೊಡ್ಡ ಯುದ್ಧವೇ ನಡೆಯಲಿದೆ. ಇದನ್ನ ಬಹಳ ವಿವೇಕತೆಯಿಂದ ಅಲ್ಲು ಅರ್ಜುನ್ ನಿಭಾಯಿಸಿದ್ದಲ್ಲಿ ಮಾತ್ರ ತಾರ್ಕಿಕ ಅಂತ್ಯ ಸಿಗಲಿದೆ. ಇಲ್ಲವಾದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯಂತೆ ಮೆಗಾ ಫ್ಯಾಮಿಲಿ ಛಿದ್ರವಾಗಲಿದೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್