ಬೆಂಗಳೂರು: ಬೆಂಗಳೂರು ಮೆಟ್ರೋಅಥವಾ ನಮ್ಮ ಮೆಟ್ರೋ ಲಕ್ಷಾಂತರ ಪ್ರಯಾಣಿಕರ ದೈನಂದಿನ ಸಾರಿಗೆ ವ್ಯವಸ್ಥೆಯಾಗಿದೆ. ಬೆಂಗಳೂರು ನಗರದ ವಿವಿಧ ಸ್ಥಳಗಳಿಗೆ ಪ್ರಯಾಣಿಕರನ್ನು ಅತೀ ಬೇಗ ತಲುಪಿಸುವ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ ಎಂದರೆ ತಪ್ಪಾಗಲಾರದು. ಕಳೆದ 13 ವರ್ಷಗಳಿಂದ ಮೆಟ್ರೋ ಸಾರಿಗೆ ವ್ಯವಸ್ಥೆ ಬೆಂಗಳೂರಿನ ಜನರಿಗೆ ದೈನಂದಿನ ಒಡನಾಡಿಯಾಗಿದೆ. ಸಾವಿರಾರು ಜನರು ತಮ್ಮ ದಿನನಿತ್ಯದ ಓಡಾಟಕ್ಕಾಗಿ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಮೆಟ್ರೊದಲ್ಲಿ ಪ್ರಯಾಣವೂ ಸುಲಭ, ಸಮಯವೂ ಕಡಿಮೆ. ಇದೇ ಕಾರಣಕ್ಕೆ ಹೆಚ್ಚಿನವರು ಈ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಇಷ್ಟಪಡುತ್ತಾರೆ.
ಇಂತಹ ಜನಸ್ನೇಹಿ ಮೆಟ್ರೋ ಇದೀಗ ಒಂದು ಹೊಸ ದಾಖಲೆಯನ್ನು ಬರೆದಿದೆ. ಒಂದೇ ದಿನ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಭಾರೀ ಏರಿಕೆ ಕಂಡಿದ್ದು, ಗರಿಷ್ಠ ಪ್ರಮಾಣ ತಲುಪಿದೆ. ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ನೀಡಿರುವ ನಮ್ಮ ಮೆಟ್ರೋ, ಡಿಸೆಂಬರ್ 06 ರಂದು ಒಂದೇ ದಿನ ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಬರೋಬ್ಬರಿ 9,20,562 ಲಕ್ಷಕ್ಕೂ ಅಧಿಕ ಮಂದಿ ಸಂಚಾರ ಮಾಡಿದ್ದಾರೆ. ಇದು ಈವರೆಗಿನ ಅತೀ ಹೆಚ್ಚು ಪ್ರಯಾಣಿಕರು ಓಡಾಟ ಮಾಡಿದ ಸಂಖ್ಯೆಯಾಗಿದೆ ಎಂದು ತಿಳಿಸಿದೆ.
ನೇರಳೆ ಮಾರ್ಗದಲ್ಲಿ 4,39,616 ಜನ ಪ್ರಯಾಣಿಸಿದ್ದು, ಹಸಿರು ಮಾರ್ಗದಲ್ಲಿ 3,12,248 ಜನ ಪ್ರಯಾಣಿಸಿದ್ದಾರೆ. ಕೆಂಪೇಗೌಡ ನಿಲ್ದಾಣದಿಂದ ಮಾರ್ಗ ಬದಲಿಸುವ ಮೂಲಕ 1,67,617 ಜನ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್ಸಿಎಲ್ (BMRCL) ಮಾಹಿತಿ ಹಂಚಿಕೊಂಡಿದೆ.
ಈ ಹಿಂದೆ ಅಂದರೆ ಆಗಸ್ಟ್ 14, 2024ರಂದು ನಮ್ಮ ಮೆಟ್ರೋ ಇದೇ ರೀತಿಯ ಇತಿಹಾಸ ಸೃಷ್ಟಿಸಿತ್ತು. ಆಗಸ್ಟ್ 14, 2024 ರಂದು ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿತ್ತು. ಇದೀಗ ನಮ್ಮ ಮೆಟ್ರೋದಲ್ಲಿ 9.20 ಲಕ್ಷಕ್ಕೂ ಅಧಿಕ ಜನ ಪ್ರಯಾಣಿಸುವ ದಾಖಲೆಯನ್ನು ಮುರಿದಿದೆ.