ರಾಜ್ಯದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಇಂದು ವಿಧಿವಶರಾಗಿದ್ದಾರೆ ಎಂಬ ಸುದ್ದಿ ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಆಘಾತವಾಗಿದೆ. 1932ರಲ್ಲಿ ಮೈಸೂರಿನ ಸೋಮನಹಳ್ಳಿ ಗ್ರಾಮದಲ್ಲಿ ಜನಿಸಿದ ಎಸ್ಎಂ ಕೃಷ್ಣ ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಲ್ಲಿ ಪ್ರಾರಂಭಿಸಿ, ಪಕ್ಷದ ಪ್ರಮುಖ ಮುಖಂಡರಾಗಿ ಮತ್ತು ದೇಶದ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಖ್ಯಾತಿಯನ್ನು ಗಳಿಸಿದರು.
ಕರ್ನಾಟಕದ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ಕೇಂದ್ರ ವಿದೇಶಾಂಗ ಸಚಿವರಾಗಿ ಅವರು ನಿರ್ವಹಿಸಿದ ಸೇವೆಗಳು ದೇಶಕ್ಕೆ ಮಹತ್ವದ ಕೊಡುಗೆಯಾಗಿ ಗುರುತಿಸಲ್ಪಟ್ಟಿವೆ.ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆಯಲು ಚಲನಚಿತ್ರ ತಾರೆ ಮತ್ತು ಮಾಜಿ ಸಂಸದೆ ರಮ್ಯಾ ಆಗಮಿಸಿ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ರಾಜಕೀಯಕ್ಕೆ ರಮ್ಯಾರನ್ನು ಪರಿಚಯಿಸಿದವರು ಎಸ್ಎಂ ಕೃಷ್ಣ, ಹೀಗಾಗಿ ಅವರ ಬಗ್ಗೆ ವಿಶೇಷ ಗೌರವ ಹೊಂದಿದ್ದ ರಮ್ಯಾ, “ನನಗೆ ಮಾನಸಿಕವಾಗಿ ತುಂಬಾ ನೋವಾಗಿದೆ, ನಾನು ಯಾವುದೇ ಹೇಳಿಕೆ ನೀಡಲು ತಯಾರಿಲ್ಲ,” ಎಂದು ಭಾವೋದ್ರಿಕ್ತ ಧ್ವನಿಯಲ್ಲಿ ಹೇಳಿದ್ದಾರೆ. ಎಸ್ಎಂ ಕೃಷ್ಣ ಅವರನ್ನುರಮ್ಯಾ ಅತ್ಯಂತ ಆದರದಿಂದ ‘ಅಂಕಲ್’ ಎಂದು ಕರೆಯುತ್ತಿದ್ದರು.
ಕೃಷ್ಣ ಅವರು ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ವೈದೇಹಿ ಆಸ್ಪತ್ರೆಗೆ ಪ್ರಾರಂಭಿಕ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರು, ಶ್ವಾಸಕೋಶದ ಸೋಂಕು ತೀವ್ರಗೊಳ್ಳುತ್ತಿದ್ದಂತೆ ಮಣಿಪಾಲ್ ಆಸ್ಪತ್ರೆಗೆ ವರ್ಗಾಯಿಸಲ್ಪಟ್ಟಿದ್ದರು. ಡಾ. ಸತ್ಯನಾರಾಯಣ ಮೈಸೂರು ಹಾಗೂ ಡಾ. ಸುನೀಲ್ ಕಾರಂತ್ ನೇತೃತ್ವದ ವೈದ್ಯರ ತಂಡ ಅವರ ಆರೋಗ್ಯ ಪುನಃಸ್ಥಾಪಿಸಲು ಶ್ರದ್ಧೆಯಿಂದ ಪ್ರಯತ್ನಿಸಿದರೂ ಕೂಡ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ರಾಜಕೀಯ, ಸಾಮಾಜಿಕ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ತೋರಿಸಿದ ದಕ್ಷತೆ ಮತ್ತು ಸಾಧನೆ ಕರ್ನಾಟಕದ ಅತಿ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಅವರನ್ನು ಅಪ್ರತಿಮವಾಗಿ ಸ್ಥಾಪಿಸಿತು. ಅವರ ಅಗಲಿಕೆಯು ಕರ್ನಾಟಕಕ್ಕೆ ಮತ್ತು ದೇಶಕ್ಕೆ ಅಪಾರ ನಷ್ಟ ತಂದಿದೆ.