ಮಂಚು ಮೋಹನ್ ಬಾಬು ಕುಟುಂಬದಲ್ಲಿ ಕಳೆದ ಮೂರು ದಿನಗಳಿಂದ ಕೌಟುಂಬಿಕ ಕಲಹ ಗಂಭೀರ ತಾಪಕ್ಕೆ ತಲುಪಿದ್ದು, ಮಂಗಳವಾರ ರಾತ್ರಿ ಹಿರಿಯ ನಟ ಮಂಚು ಮೋಹನ್ ಬಾಬು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಲ್ಪಲ್ಲಿ ನಿವಾಸದಲ್ಲಿ ನಡೆದ ಘಟನೆ ಹಿಂಸಾತ್ಮಕ ಸ್ವರೂಪ ಪಡೆದು, ಮಂಚು ಮನೋಜ್ ನೇಮಿಸಿದ ಬೌನ್ಸರ್ಗಳು ಮತ್ತು ಮೋಹನ್ ಬಾಬು ರಕ್ಷಣೆಗೆ ಮಂಚು ವಿಷ್ಣು ನೇಮಿಸಿದ್ದ ಬೌನ್ಸರ್ಗಳ ನಡುವೆ ತೀವ್ರ ಘರ್ಷಣೆ ಉಂಟಾಯಿತು. ಮೋಹನ್ಬಾಬು, ಮನೋಜ್ ಮತ್ತು ಮೌನಿಕಾಳನ್ನು ಮನೆಗೆ ಪ್ರವೇಶಿಸಲು ಬಿಡದಿದ್ದಾಗ, ಮನೋಜ್ ಗೇಟು ಮುರಿದು ಒಳಬರಲು ಯತ್ನಿಸಿದ್ದಾರೆ. ಈ ವೇಳೆ ಮೋಹನ್ ಬಾಬು ತಲೆಗೆ ಪೆಟ್ಟು ಬಿದ್ದಿರುವುದಾಗಿ ವರದಿಯಾಗಿದೆ. ಈ ವೇಳೆ ಮನೆಯಿಂದ ಹೊರ ಬಂದ ಮೋಹನ್ ಬಾಬು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ
ಮೋಹನ್ ಬಾಬು ಅವರನ್ನು ತಕ್ಷಣವೇ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲಾದ ಹಲ್ಲೆ ಪ್ರಕರಣವು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಘಟನೆ ನಂತರ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ತೀವ್ರವಾಗಿ ಪ್ರತಿಕ್ರಿಯೆ ನೀಡಿರುವ ಮೋಹನ್ ಬಾಬು ಅವರ ವರ್ತನೆಗೆ ಪತ್ರಕರ್ತರ ಸಂಘಗಳು ತೀಕ್ಷ್ಣ ವಿರೋಧ ವ್ಯಕ್ತಪಡಿಸಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ತೆಲಂಗಾಣ ಸರ್ಕಾರವನ್ನು ಒತ್ತಾಯಿಸಲಾಗಿದೆ. ಎಂಎಲ್ಸಿ ತೀನ್ಮಾರ್ ಮಲ್ಲಣ್ಣ ಸೇರಿದಂತೆ ಹಲವಾರು ರಾಜಕೀಯ ನಾಯಕರು ಈ ಕುರಿತು ಟೀಕಿಸಿದ್ದಾರೆ. ಪೊಲೀಸರು ಈ ಘಟನೆಗೆ ತಕ್ಷಣವೇ ಸ್ಪಂದಿಸಿ, ಮೋಹನ್ ಬಾಬು, ಮಂಚು ಮನೋಜ್, ಮತ್ತು ಮಂಚು ವಿಷ್ಣು ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಜಲ್ಪಲ್ಲಿ ಮನೆಗೆ ಭದ್ರತೆ ನೀಡಲಾಗಿದ್ದು, ಮನೋಜ್ ಮತ್ತು ಮೋಹನ್ ಬಾಬು ಅವರ ಲೈಸೆನ್ಸ್ ಗನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮಧ್ಯೆ, ಮೋಹನ್ ಬಾಬು ತಮ್ಮ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದಾಗಿ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಇಡೀ ಪ್ರಕರಣ ಮತ್ತಷ್ಟು ಕುತೂಹಲಕರ ವಾಗಿದೆ. ಅವರ ಆರೋಗ್ಯದ ಸ್ಥಿತಿ ಹೆಚ್ಚಿನ ಅಪ್ಡೆಟ್ಸ್ ಇಂದು ಬರುವ ನಿರೀಕ್ಷೆ ಇದೆ.