ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ನೆನ್ನೆ ಪಂಚಮಸಾಲಿ ಸಮುದಾಯದ ನಾಯಕರು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಅವರನ್ನು ತಡೆಯಲು ಹೊರಟ ಕೆಲ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಿದ್ದೇವೆ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ.
ಹೈಕೋರ್ಟ್ ಆದೇಶವನ್ನ ಹೋರಾಟದ ಆಯೋಜಕರು ಉಲ್ಲಂಘಿಸಿದ್ದ ಪರಿಣಾಮ ಪೊಲೀಸರು ಹಲವು ನಾಯಕರನ್ನು ಬಂಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಲಿಂಗಾಯತ ಸಮುದಾಯದ ನಾಯಕರು ಹೈವೇ ಬಂದ್ ಮಾಡಿ ಕಲ್ಲು, ಚಪ್ಪಲಿ ತೂರಾಟ ನಡೆಸಿದ್ದರು. ಅವರ ಈ ವರ್ತನೆಗೆ ಪೊಲೀಸರಿಂದ ಬಲ ಪ್ರಯೋಗ ನಡೆದಿತ್ತು.
ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಮೊಹಮ್ಮದ್ ರೋಷನ್, ಐಜಿಪಿ ವಿಕಾಸಕುಮಾರ, ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್, ಎಸ್ಪಿ ಡಾ.ಭೀಮಾಶಂಕರ ಗುಳೇದ್ ರಿಂದ ಸ್ಪಷ್ಟನೆ ಸಿಕ್ಕಿದೆ. ಜಂಟಿ ಪ್ರೇಸ್ಮೀಟ್ ಮಾಡಿ ಲಾಠಿ ಚಾರ್ಜ್ ಅನ್ನು ಸಮರ್ಥಿಸಿಕೊಂಡಿದೆ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ. ಕಾನೂನು ಸುವ್ಯವಸ್ಥೆ, ಸಾರ್ವಜನಿಕರ ಹಿತ ದೃಷ್ಟಿಯಿಂದ ಬಲ ಪ್ರಯೋಗ ಮಾಡಿದ್ದೇವೆ. ಹೈಕೋರ್ಟ್ ಸ್ಪಷ್ಟವಾಗಿ ಟ್ರ್ಯಾಕ್ಟರ್ ತರುವಂತಿಲ್ಲಾ, ಶಾಂತಿಯುತ ಪ್ರತಿಭಟನೆ ನಡೆಸುವಂತೆ ಆಯೋಜಕರಿಗೆ ಸೂಚನೆ ನೀಡಿತ್ತು. ಇದರ ಜೊತೆಗೆ ಕೊಂಡಸಕೋಪ್ಪ ಬಳಿ ಪ್ರತಿಭಟನೆ ನಡೆಸಲು ಅನುಮತಿ ಕೊಡಲಾಗಿತ್ತು ಎಂದಿದ್ದಾರೆ. ಆಯೋಜಕರು ಆದೇಶ ಉಲ್ಲಂಘಿಸಿದನ್ನ ಹೈಕೋರ್ಟ್ ಗಮನಕ್ಕೆ ತರುತ್ತೇವೆ ಎಂದು ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಕಲ್ಲು, ಚಪ್ಪಲಿ ತೂರಾಟ ಪ್ರಕರಣದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ಸೇರಿ 13 ಜನ ಪೊಲೀಸ್ ಪೇದೆಗೆ ಗಾಯಗಳಾಗಿವೆ. ಗಾಯಗೊಂಡವರು ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲ್ಲು ತೂರಾಟದಲ್ಲಿ 10 ಪೊಲೀಸ್ ವಾಹನಗಳು ಜಖಂ ಆಗಿವೆ. 7 ಸರ್ಕಾರಿ ಬಸ್, 1 ಸ್ಕಾರ್ಪಿಯೋ, 2 ಬಲೋರೋ ಜೀಪ್ ಜಖಂ ಆಗಿದೆ ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ.