ನಟ ರಜನಿಕಾಂತ್ ಎಂಬುವುದು ಕೇವಲ ಹೆಸರಷ್ಟೇ ಅಲ್ಲ ಅದೊಂದು ಬ್ರ್ಯಾಂಡ್ ಕಾಲಿವುಡ್ನಲ್ಲಿ ಹಿಂದೆಯೂ ಹಿಂದೆ ಇಂದು ಮತ್ತು ಎಂದೆಂದೂ ರಜನಿ ಎರಾ ನಡೆಯುತ್ತಿದೆ. ಅದು ಎಂದಿಗೂ ಮಾಸುವುದಿಲ್ಲ. ಎಂದಿನಂತೆಯೇ ರಜನಿಕಾಂತ್ ಈಗಲೂ ಬೇಡಿಕೆಯ ನಟ. ಇವರಿಗೆ ಈಗ 74 ವರ್ಷ ಇಂದು ಅವರ ಹುಟ್ಟುಹಬ್ಬ. ದೇಶದೆಲ್ಲೆಡೆ ರಜನಿ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರ್ತಿದೆ. ಇವರು ಇತ್ತೀಚಿನ ಹಿರೋಗಳಿಗೆ ಸ್ಪೂರ್ತಿ. ಆರಂಭದಲ್ಲಿ ಇವರು ಕಂಡಕ್ಟರ್ ಕೆಲಸ ಕೂಡ ಮಾಡಿದ್ದರು. ತದ ನಂತರ ಹೀರೋ ಆಗಿ ಕಾಲಿವುಡ್ ಅನ್ನು ಆಳಿದರು. ಕರ್ನಾಟಕದಿಂದ ತಮಿಳುನಾಡಿಗೆ ತೆರಳಿ ಹೆಸರು ಮಾಡಿದರು. ಅವರಿಗೆ ನಿರ್ಮಾಪಕರಿಂದ ಅವಮಾನ ಆಗಿತ್ತು. ಅವರ ಎದುರೇ ದುಬಾರಿ ಕಾರಲ್ಲಿ ಬಂದರು.
2020ರಲ್ಲಿ ‘ದರ್ಬಾರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ರಜನಿಕಾಂತ್ ಮಾತನಾಡಿದ್ದರು. ತಮ್ಮ ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡಿದ್ದರು. ತಮಿಳು ಚಿತ್ರರಂಗದಲ್ಲಿ ರಜನಿ ಆಗತಾನೇ ಹೆಸರು ಮಾಡುತ್ತಿದ್ದರು. ಆಗ ಅವರಿಗೆ ನಿರ್ಮಾಪಕರಿಂದ ಅವಮಾನ ಆಗಿತ್ತು. ಕಾರಿನಲ್ಲಿ ಲಿಫ್ಟ್ ಕೇಳಿದ್ದಕ್ಕೆ ಕೊಡಲು ಆ ನಿರ್ಮಾಪಕರು ನಿರಾಕಾರಿಸಿದ್ದರು. ನಂತರದ ವರ್ಷಗಳಲ್ಲಿ ಆಗಿದ್ದು ಜಾದೂ. ‘ನನಗೆ ಸಿನಿಮಾ ಆಫರ್ ಬಂತು. ಅದು ನಿಜಕ್ಕೂ ಉತ್ತಮ ಪಾತ್ರವಾಗಿತ್ತು. ನನ್ನ ಬಳಿ ಡೇಟ್ಸ್ ಕೂಡ ಇತ್ತು. ನಾನು ಒಪ್ಪಿಕೊಂಡೆ. ಆರಂಭದಲ್ಲಿ ಸಂಭಾವನೆ ಚರ್ಚಿಸಿದೆವು. ನಾನು 10 ಸಾವಿರ ರೂಪಾಯಿ ಕೇಳಿದೆ. ಆದರೆ, ಅವರು 6 ಸಾವಿರ ರೂಪಾಯಿ ಕೊಡಲು ಒಪ್ಪಿದರು. ನಾನು 100 ರೂಪಾಯಿ ಟೋಕನ್ ಅಡ್ವಾನ್ಸ್ ಕೇಳಿದ್ದೆ. ಆದರೆ, ಹಣ ಇಲ್ಲ ಎಂದು ಅಂದು ಅಡ್ವಾನ್ಸ್ ಕೊಡಲಿಲ್ಲ ಎಂದಿದ್ದಾರೆ’ ಎಂದಿದ್ದಾರೆ ರಜನಿ.
ಮರುದಿನ ರಜನಿ ಎವಿಎಂ ಸ್ಟುಡಿಯೋಗೆ ಶೂಟ್ಗೆ ಹೋದರು. ಆದರೆ, ಅಡ್ವಾನ್ಸ್ ಹಣ ಸಿಗಲಿಲ್ಲ. ನಂತರ ಹೀರೋ ಬಂದರು ರೆಡಿ ಆಗು ಎಂದು ಸೆಟ್ನಲ್ಲಿದ್ದವರು ಹೇಳಿದರು. ಆದರೆ, ಇದಕ್ಕೆ ಅವರು ರೆಡಿ ಇರಲಿಲ್ಲ. ಇದರಿಂದ ಕೋಪಗೊಂಡ ನಿರ್ಮಾಪಕರು, ‘ನೀನೇನು ದೊಡ್ಡ ಸ್ಟಾರಾ? ಮಾಡಿರೋದು ಒಂದೆರಡು ಸಿನಿಮಾ. ಅಡ್ವಾನ್ಸ್ ಹಣ ಇಲ್ಲದೆ ಶೂಟ್ ಮಾಡಲ್ವ? ನಿಂಗೆ ಯಾವುದೇ ಪಾತ್ರ ಇಲ್ಲ ಹೋಗು’ ಎಂದು ಹೇಳಿದ್ದರು. ಹಣ ಇಲ್ಲದ ಕಾರಣಕ್ಕೆ ರಜನಿ ಮನೆಗೆ ನಡೆದೇ ಹೋದರು. ಆ ವೇಳೆ ರಜನಿಕಾಂತ್ ನಟನೆಯ ‘16 ವಯದಿನಿಲೆ’ ಸಿನಿಮಾ ಒಂದು ಹಿಟ್ ಆಯಿತು. ಅವರದ್ದೇ ಡೈಲಾಗ್ನ ಜನರು ರಿಪೀಟ್ ಮಾಡಲು ಪ್ರಾರಂಭಿಸಿದರು. ಆಗ ಅವರು ವಿದೇಶಿ ಕಾರಲ್ಲಿ ಶೂಟಿಂಗ್ ಸೆಟ್ಗೆ ಹೋಗುವ ನಿರ್ಧಾರ ಮಾಡಿದರು. ನಂತರ ಕೆಲವೇ ವರ್ಷಗಳಲ್ಲಿ ಕಾಲಿವುಡ್ನಲ್ಲಿ ಅವರು ದೊಡ್ಡ ಹೀರೋ ಆದರು. ಈ ಘಟನೆ ನಡೆದು ಎರಡೂವರೆ ವರ್ಷ ಬಿಟ್ಟು ಅವರು ದುಬಾರಿ ಕಾರಲ್ಲಿ ಎವಿಎಂ ಸ್ಟುಡಿಯೋಗೆ ಬಂದರು. ಇದು ರಜನಿಕಾಂತ್ ಮಾಡಿದ ಸಾಧನೆ.