ತುಮಕೂರು: ಜಿಲ್ಲೆಯ ಬೆಳ್ಳಾವಿ ಕ್ಷೇತ್ರದ ಕಾಂಗ್ರೆಸ್ನ ಮಾಜಿ ಶಾಸಕ ಆರ್ ನಾರಾಯಣ ಅವರು ವಿಧಿವಶರಾಗಿದ್ದಾರೆ. 81 ವರ್ಷದ ಆರ್.ನಾರಾಯಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಕಾಂಗ್ರೆಸ್ನ ಟಿಕೆಟ್ನಲ್ಲಿ ಸ್ಪರ್ಧಿಸಿ ಬೆಳ್ಳಾವಿ ಕ್ಷೇತ್ರವನ್ನು 3 ಬಾರಿ ಪ್ರತಿನಿಧಿಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಧಿಕಾರವಧಿಯಲ್ಲಿ ನಾರಾಯಣ ಅವರು ಹೌಸಿಂಗ್ ಬೋರ್ಡ್ ಚೇರ್ಮನ್ ಆಗಿದ್ದರು. ನಾರಾಯಣ ಅವರ ಅಂತಿಮ ದರ್ಶನವನ್ನು ಗಾಂಧಿನಗರದ ನಿವಾಸದಲ್ಲಿ ಏರ್ಪಡಿಸಲಾಗಿದೆ. ಮಾಜಿ ಶಾಸಕ ನಾರಾಯಣ್ ಅವರು ಮದುವೆಯಾಗಿರಲಿಲ್ಲ, ಒಂಟಿಯಾಗಿ ತುಮಕೂರಿನ ಸಿಎಸ್ಐ ಲೇಔಟ್ನಲ್ಲಿರುವ ಮನೆಯಲ್ಲಿ ವಾಸವಿದ್ದರು.
ಆರ್.ನಾರಾಯಣ ಅವರ ಸಾವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಆರ್.ನಾರಾಯಣ ಅವರ ನಿಧನದ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ. ಕೆಂಗಲ್ ಹನುಮಂತಯ್ಯ ಅವರ ಅನುಯಾಯಿಯಾಗಿ ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಗೆ ಶ್ರಮಿಸಿದ್ದವರ ಪೈಕಿ ನಾರಾಯಣ ಒಬ್ಬರು. ತಮ್ಮ ಅಚ್ಚುಕಟ್ಟುತನದಿಂದ ಕೂಡಿದ ಕೆಲಸಕ್ಕೆ ಹೆಸರುವಾಸಿಯಾಗಿದ್ದರು. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದರು. ಕಾಂಗ್ರೆಸ್ ಪಕ್ಷದ ಏಳಿಗೆಗೆ ಇವರ ಕೊಡುಗೆ ಬಹಳಷ್ಟಿದೆ. ಸರಳ, ಸಜ್ಜನಿಕೆಯ ನಾರಾಯಣ ಅವರು ದೂರವಾಗಿರುವುದು ನೋವಿನ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.