2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸದ್ಯ ಸದನದ ಒಳಗೂ ಮತ್ತು ಹೊರಗೂ ಸಾಕಷ್ಟು ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರು ಇದನ್ನೇ ಅಸ್ತ್ರ ಮಾಡಿಕೊಂಡು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಪಂಚಮಸಾಲಿ ಸಮುದಾಯದ ಶಾಸಕ ವಿಜಯಾನಂದ ಕಾಶಪ್ಪನವರ್, ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರು, ಆರ್ಎಸ್ಎಸ್ನವರು ಎಂದು ಬೆಳಗಾವಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್, ನಮ್ಮ ಸಮಾಜದ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡುವ ಹಾಗಾಯಿತು. ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್ಎಸ್ಎಸ್ನವರು. ಪೊಲೀಸರ ಮೇಲೆ ಕಲ್ಲು ತೂರಲು ಪ್ರವೋಕ್ ಮಾಡಿದ್ದು ಸ್ವಾಮೀಜಿ. ಸಮಾಜವನ್ನ ಕಟ್ಟುವ ಕೆಲಸ ನಮಗೆ ಗೊತ್ತಿದೆ ಎಂದು ಸ್ವಾಮೀಜಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಸ್ವಾಮೀಜಿಗೆ ಗೌರವ ಕೊಡುತ್ತೇನೆ. 712 ಕಿ.ಮೀ ಹೋರಾಟ ಮಾಡಿದ್ದೇವೆ. ಪ್ರತಿಭಟನೆ ವೇಳೆ ಒಂದಾದರೂ ಗಲಾಟೆ ಆಯ್ತಾ? ಉದ್ದೇಶ ಪೂರ್ವಕವಾಗಿ ಈಗ ಗಲಾಟೆ ಮಾಡಿಸಿದ್ದಾರೆ. ಗಾಯಾಳುಗಳನ್ನ ಯಾರು ನೋಡಿಕೊಳ್ಳುತ್ತಾರೆ. ಸ್ವಾಮೀಜಿ ನೋಡ್ಕೋತಾರ? ಮುಖಂಡರು ನೋಡಿಕೊಳ್ಳುತ್ತಾರಾ? ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಅದನ್ನ ತೆಗೆಯಬೇಕು. ಸ್ವಾಮೀಜಿ ತೀರ್ಮಾನ ಒಂದೇ ಅಲ್ಲಾ ಸಮಾಜ ಇದೆ. ನಾವು 12 ಜನ ಶಾಸಕರಿದ್ದೇವೆ. ಬಿಜೆಪಿ ಪಾರ್ಟಿಯ ವೇದಿಕೆಗೆ ಹೋಗಿ ಭಾಷಣ ಮಾಡುತ್ತಾರೆ. ನಾವು ಮೀಸಲಾತಿ ಕೊಡಿಸುತ್ತೇವೆ ಎಂದಿದ್ದಾರೆ.
ಇನ್ನೂ ಸಂವಿಧಾನ ವಿರೋಧಿ ಆಗುತ್ತೆ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಕಾಶಪ್ಪನವರ್ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ಸಿಎಂ ಹೇಗೆ ಕೊಡುವುದಕ್ಕೆ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ. ಸಿಎಂ ಸುಗ್ರಿವಾಜ್ಞೆ ಹೋರಡಿಸಲು ಆಗುವುದಿಲ್ಲ. ನಾನು ಸದನದಲ್ಲಿ ಮಾತಾಡಿದರೆ, ಸಭಾಪತಿಗಳ ಮೇಲೆ ಹಲ್ಲೆ ಮಾಡಲು ಬಿಜೆಪಿಯವರು ಹೋಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.