ಬೆಳಗಾವಿ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಂದು ಜೋತಿಷ್ಯ ಸಲಹೆ ಗುಟ್ಟಿನ ಮೇಲೆ ಸ್ವಾರಸ್ಯಕರ ಚರ್ಚೆ ನಡೆಯಿತು. ಎಸ್ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರ ಮಾತಿನ ಮೇಲೆ ವಿಪಕ್ಷ ನಾಯಕ ಆರ್ ಅಶೋಕ್ ಚರ್ಚೆ ನಡೆಸಿದರು.
“ಈಗಲೂ ಅದೇ ಕೆಲಸ ಮಾಡುತ್ತೀರಾ? ಅಧಿಕಾರ ಸಿಗದಿದ್ದರೆ ಒದ್ದು ಕಿತ್ತುಕೊಳ್ಳಬೇಕು ಎಂದಿದ್ದೀರಿ. ಇಲ್ಲಿರುವವರಿಗೆಲ್ಲಾ ಅದೇ ಪಾಠವೇ? ಈಗ ಮುಖ್ಯಮಂತ್ರಿ ಪದವಿಯನ್ನು ನೀವು ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಿ? ನಿಮಗೆ ಜೋತಿಷ್ಯ ಹೇಳುವವರು ನನಗೂ ಪರಿಚಯ. ಜನವರಿಯೊಳಗೆ ಸಿಎಂ ಆದರೆ ನೀವು ಸಿಎಂ ಆಗುತ್ತೀರಾ ಇಲ್ಲದಿದ್ದರೆ ಇಲ್ಲ ಎಂದು ಹೇಳಿರುವುದಾಗಿ ಅವರೇ ನನಗೆ ಹೇಳಿದ್ದಾರೆ. ಜನವರಿಯೊಳಗೆ ನಂತರ ನಿಮ್ಮ ಗ್ರಹಗತಿ ಇಲ್ಲ. ಹೀಗಾಗಿ ಆದಷ್ಟು ಬೇಗ ನಿಮ್ಮ ರೋಷ ತೋರಿಸಿ ಅಧಿಕಾರ ಕಿತ್ತುಕೊಳ್ಳಿ”ಎಂದು ತಿಳಿಸಿದರು.
ಅದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “ಅದೇ ಜೋತಿಷ್ಯಿ ಸಲಹೆ ಕೇಳಿ ನಾವು ಕೃಷ್ಣ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೆವು. ನಾನು ಮಂತ್ರಿ ಶಾಸಕ ಆಗದಿದ್ದಾಗಲೇ ಆ ಜೋತಿಷ್ಯಿ ಅವರು ನಿನಗೆ ಟಿಕೆಟ್ ನಿರಾಕರಣೆಯಾಗುತ್ತದೆ, ನೀನು ಇಷ್ಟ ಬಾರಿ ಶಾಸಕನಾಗುತ್ತೀಯಾ, ಮಂತ್ರಿಯಾಗುತ್ತೀಯಾ ಎಂದು ಹೇಳಿದ್ದಾರೆ. ನನಗೆ ಯಾವಾಗ ಯಾವ ಸ್ಥಾನ ಸಿಗಲಿದೆ” ಎಂದು ಹೇಳಿದ್ದರು.
ಅಶೋಕ್ ಅವರೇ, ನಮ್ಮ ಜೋತಿಷ್ಯಿ ನನಗೆ ಹೇಳಿರುವ ವಿಚಾರವನ್ನು ಇಲ್ಲಿ ಹೇಳಿದರೆ, ನಿಮ್ಮ ಕಡೆ ಕೂತಿರುವ 25 ಮಂದಿ, ನಮ್ಮ ಕಡೆಗೆ ಶಿಫ್ಟ್ ಆಗುತ್ತಾರೆ. ಹೀಗಾಗಿ ನಾನು ಆ ವಿಷಯವನ್ನು ಈಗ ಮಾತನಾಡುವುದಿಲ್ಲ” ಎಂದಾಗ ಸದನ ನಗೆಗಡಲಲ್ಲಿ ತೇಲಿತು.