ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ಪಡೆದಿದ್ದ ನಟ ದರ್ಶನ್ಗೆ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಈಗ ದರ್ಶನ್ಗೆ ಜಾಮೀನು ಸಿಕ್ಕಿದ್ದರಿಂದ ಅವರು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇಲ್ಲದಂತಾಗಿದೆ. ಬೆನ್ನು ನೋವಿಗೆ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಅವಕಾಶ ಸಿಕ್ಕಿದೆ. ಇನ್ನು ಮುಂದೆ ಅವರು ಸಿನಿಮಾ ಚಿತ್ರೀಕರಣದಲ್ಲೂ ಭಾಗವಹಿಸಲು ಅವಕಾಶ ಸಿಗಲಿದೆ.
ಡೆವಿಲ್ ಸಿನಿಮಾ ಶೂಟಿಂಗ್ ಯಾವಾಗ?
ಕಾಟೇರ ಸಿನಿಮಾ ಚಂದನವನದಲ್ಲಿ ಹೊಸ ದಾಖಲೆ ಬರೆದಿದ್ದ ಚಿತ್ರ, ದರ್ಶನ್ ಯಶಸ್ಸಿನ ಮತ್ತೊಂದು ಮೆಟ್ಟಿಲೇರಿದ್ದರು. ಕಾಟೇರ ಬಳಿಕ ಅವರು ಡೆವಿಲ್ ಸಿನಿಮಾದಲ್ಲಿ ನಟಿಸುತ್ತಿದ್ದರು, ಸಿನಿಮಾ ಶೂಟಿಂಗ್ ಆಗಲೇ ಆರಂಭವಾಗಿತ್ತು, ಮೈಸೂರಿನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಇದರಿಂದ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಈಗ ದರ್ಶನ್ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲು ಅವಕಾಶವಿರುವ ಕಾರಣ ಅವರು ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸುವ ಸಾಧ್ಯತೆ ಇದೆ.
ಜೈಲಿನಲ್ಲಿದ್ದಾಗ ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ಈಗಾಗಲೇ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ಶಸ್ತ್ರಚಿಕಿತ್ಸೆಗೆ ಒಳಗಾಗದೇ ಇದ್ದರೆ ಅವರು ಆದಷ್ಟು ಬೇಗನೆ ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಎರಡು ಮೂರು ತಿಂಗಳಿನಲ್ಲೇ ದರ್ಶನ್ ಫಿಟ್ ಆಗಲಿದ್ದು ಬಳಿಕ ಶೂಟಿಂಗ್ ಆರಂಭಿಸುವ ನಿರೀಕ್ಷೆ ಇದೆ. 2025ರಲ್ಲಿ ಡೆವಿಲ್ ತೆರೆಗೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಅಭಿಮಾನಿಗಳು ಚಿತ್ರಮಂದಿರದಲ್ಲಿ ಹಬ್ಬ ಮಾಡಲು ತಯಾರಿ ಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.