ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಕಳೆದ ತಿಂಗಳ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾವು ಮದುವೆ ಆಗಲಿರುವ ಹುಡುಗಿಯನ್ನು ಪರಿಚಯಿಸಿದ್ದರು. ಹೋದಲ್ಲಿ ಬಂದಲ್ಲಿ ಮದುವೆ ಯಾವಾಗ ಯಾವಾಗ ಎಂದು ಕೇಳುತ್ತಿದ್ರಲ್ಲ, ಇವಳನ್ನೇ ನಾನು ಮದುವೆ ಆಗೋದು ಎಂದು ಹೇಳಿಕೊಂಡಿದ್ದರು. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ಅವರನ್ನು ಧನಂಜಯ್ ವರಿಸುತ್ತಿದ್ದಾರೆ. ಇವರು ಮೂಲತಃ ಚಿತ್ರದುರ್ಗದವರು. ಈಗ ಇದೇ ಜೋಡಿ ಮದುವೆ ಆಮಂತ್ರಣ ರೆಡಿಯಾಗಿದೆ ಎನ್ನುವ ಮೂಲಕ, ಶೀಘ್ರದಲ್ಲಿ ಬಾಳ ಬಂಧನಕ್ಕೆ ಕಾಲಿಡಲಿದೆ.
ಸೆಲೆಬ್ರಿಟಿಗಳ ಮದುವೆ ಎಂದರೆ ಅಲ್ಲಿ ಎಲ್ಲವೂ ಅದ್ಧೂರಿತನದಿಂದ ಕೂಡಿರುತ್ತದೆ. ಸಾವಿರಾರು ರೂಪಾಯಿ ಬೆಲೆಬಾಳುವ ಲಗ್ನಪತ್ರಿಕೆಯಿಂದ ಹಿಡಿದು, ಎಲ್ಲವೂ ಗ್ರ್ಯಾಂಡ್ ಗ್ರ್ಯಾಂಡ್. ಆದರೆ, ನಟ ಧನಂಜಯ್ ಈ ಅದ್ಧೂರಿತನದಿಂದ ಕೊಂಚ ದೂರ. ಈ ಹಿಂದೆ ಮನೆಯಲ್ಲಿಯೇ ಉಂಗುರ ಬದಲಿಸಿಕೊಂಡು, ಧನ್ಯತಾ ಅವರ ಜತೆ ಸರಳ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಇದೀಗ ಮದುವೆಯೂ ಹಾಗೇ ನಡೆಯಬಹುದೇ ಎಂಬ ಕುತೂಹಲ. ಅದಕ್ಕೆ ಇದೀಗ ಸಾಕ್ಷಿ ಎಂಬಂತೆ, ಮದುವೆ ಆಮಂತ್ರಣ ಪತ್ರಿಕೆಯನ್ನು ಶೇರ್ ಮಾಡಿಕೊಂಡಿದ್ದಾರೆ ಧನಂಜಯ್.
ಫೋನ್ ಬಳಕೆ ಕಡಿಮೆ ಇದ್ದ ಹಿಂದಿನ ಕಾಲಘಟ್ಟದಲ್ಲಿ ಪತ್ರಗಳೇ ಕೇಂದ್ರಬಿಂದುವಾಗಿದ್ದವು. ಈಗ ಅದೇ ಪರಿಕಲ್ಪನೆಯಲ್ಲಿ ಮದುವೆ ಆಮಂತ್ರಣವನ್ನು ರೆಡಿ ಮಾಡಿದ್ದಾರೆ ಧನಂಜಯ್. ಆ ಪತ್ರದಲ್ಲಿ ಹೀಗೆ ಬರೆಯಲಾಗಿದೆ. “ಪ್ರಿಯ ಬಂಧು ಮಿತ್ರರೇ.. ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವುಸಂಭ್ರಮಿಸಿದ್ದು ನಮ್ಮ ಖುಷಿಯನ್ನ ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ, ಆಚರಿಸಬೇಕು ಎಂಬ ಮಹಾದಾಸೆಯಿಂದ ಈ ಪತ್ರ ಬರೆಯುತ್ತಿದ್ದೇನೆ”, “ತಾವು ಎಲ್ಲಿದ್ದರೂ, ಜಗದ ಯಾವ ಮೂಲೆಯಲ್ಲಿದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸುಖಾಗಮನಕ್ಕೆ ನೀವು ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ. ಮಿಕ್ಕಂತೆ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ, ಧನಂಜಯ- ಧನ್ಯತಾ” ಎಂದು ಬರೆದಿದ್ದಾರೆ.