ಬಡ್ಡಿ ಇಲ್ಲದೆ ಸಾಲ ಸಿಗುತ್ತೆ ಅಂದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ.. ಆದರೆ ಬಡ್ಡಿ ರಹಿತ ಸಾಲ ಸಿಗೋಕೆ ಬ್ಯಾಂಕ್ಗಳು ಹಲವಾರು ಮಾನದಂಡಗಳನ್ನ ನೋಡುತ್ತದೆ. ಬಡ್ಡಿ ಇಲ್ಲದೆ ಸಾಲ ತಗೊಳ್ಳೋ ಆಸೆ ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಉದ್ಯಮಿವರೆಗೂ ಇರುತ್ತದೆ. ಆದರೆ ಈ ಸಾಲಗಳಿಗೆ ಇರುವ ನಿಯಮಗಳ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಬಡ್ಡಿ ಇಲ್ಲದೆ ಸಾಲ ಪಡೆಯೋದು ಹೇಗೆ? ಯಾರಿಗೆಲ್ಲಾ ಸಿಗುತ್ತೆ? ಎಲ್ಲದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..
- ಚಿಲ್ಲರೆ ವ್ಯಾಪಾರದಲ್ಲಿ ಬಡ್ಡಿ ರಹಿತ ಸಾಲ ಪಡೆಯಬಹುದು. ಇಎಂಐ ಯೋಜನೆಗಳ ಮೂಲಕ ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು ಮುಂತಾದ ಮನೆಗೆ ಬೇಕಾದ ವಸ್ತುಗಳನ್ನ ಕೊಳ್ಳೋಕೆ ಬಡ್ಡಿ ಇಲ್ಲದ ಸಾಲಗಳು ತುಂಬಾ ಸಹಾಯಕಾರಿಯಾಗಿದೆ. ಇದರ ಮೂಲಕ ಹೆಚ್ಚಿನ ಬಡ್ಡಿ ಇಲ್ಲದೆ ಮೂಲ ಬೆಲೆಯನ್ನೇ ಕಂತುಗಳಲ್ಲಿ ಕಟ್ಟಬಹುದು. ಉದಾಹರಣೆಗೆ ನೀವು 60,000 ರೂ. ಮೌಲ್ಯದ ಸ್ಮಾರ್ಟ್ಫೋನ್ ಅನ್ನು 12 ತಿಂಗಳಲ್ಲಿ 5,000 ರುಪಾಯಿ ಕಂತುಗಳಲ್ಲಿ ಕೊಳ್ಳಬಹುದು.
- ರೈತರು ಹಲವಾರು ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬಡ್ಡಿ ರಹಿತ ಸಾಲ ಪಡೆಯಬಹುದು. ಈ ಸಾಲಗಳ ಮೂಲಕ ರೈತರು ಬೀಜ, ಗೊಬ್ಬರಗಳನ್ನ ಕೊಳ್ಳಬಹುದು. ವ್ಯವಸಾಯದ ಉಪಕರಣಗಳನ್ನು ಖರೀದಿಸಲು ಈ ಹಣವನ್ನು ಉಪಯೋಗಿಸಬಹುದು. ಸಕಾಲಕ್ಕೆ ಹಣ ವಾಪಸ್ ಕೊಟ್ಟರೆ ಯಾವುದೇ ದಂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ. ರೈತರಿಗೆ ಇದು ತುಂಬಾ ಸಹಾಯ ಆಗುತ್ತದೆ.
- ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ತುರ್ತು ವೈದ್ಯಕೀಯ ವೆಚ್ಚಕ್ಕೆ , ವಿದ್ಯಾಭ್ಯಾಸ ಮುಂತಾದ ತುರ್ತು ವೈಯಕ್ತಿಕ ಅವಶ್ಯಕತೆಗಳಿಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡುತ್ತಿವೆ. ಕಷ್ಟದ ಸಮಯದಲ್ಲಿ ಉದ್ಯೋಗಿಗಳಿಗೆ ಆರ್ಥಿಕ ನೆರವು ಒದಗಿಸುತ್ತವೆ. ಸಾಮಾಜಿಕ ಅಭಿವೃದ್ಧಿಗಾಗಿ ಬಡ್ಡಿ ಇಲ್ಲದ ಸಾಲಗಳನ್ನು ನೀಡುವಲ್ಲಿ ಕೆಲವು ಸೂಕ್ಷ್ಮ ಹಣಕಾಸು ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಸಾಕಷ್ಟು ಉಪಯುಕ್ತವಾಗಿವೆ. ಈ ಸಾಲಗಳು ಸಣ್ಣ ಉದ್ಯಮಿಗಳು, ಹೊಸದಾಗಿ ವ್ಯಾಪಾರ ಶುರು ಮಾಡಲು ಬಯಸುವ ಮಹಿಳೆಯರಿಗೆ ಸಹಾಯ ಮಾಡುತ್ತವೆ.
- ಹಿಂದುಳಿದ ವರ್ಗದವರು ಆರ್ಥಿಕವಾಗಿ ಶಕ್ತಿವಂತರಾಗುವ ಉದ್ದೇಶದಿಂದ ಸರ್ಕಾರಗಳು ಬಡ್ಡಿ ಇಲ್ಲದೆ ಸಾಲಗಳನ್ನು ನೀಡುತ್ತಿವೆ. ನಿಮಗೆ ಅರ್ಹತೆ ಇದ್ದರೆ ನೀವೂ ಸಹ ಪಡೆಯಬಹುದು.
- ಇದಲ್ಲದೆ, ಕ್ರೆಡಿಟ್ ಕಾರ್ಡ್ಗಳು ಸಹ ಕೆಲವೊಮ್ಮೆ ಶೂನ್ಯ ಬಡ್ಡಿದರದಲ್ಲಿ ಇಎಂಐ ಆಯ್ಕೆಗಳೊಂದಿಗೆ ಸಾಲಗಳನ್ನು ಕೊಡುತ್ತವೆ. ಈ ಕೊಡುಗೆಗಳು ಕ್ರೆಡಿಟ್ ಕಾರ್ಡ್ ಹೊಂದಿರುವವರು ನಿಯಮಗಳಿಗೆ ಅನುಗುಣವಾಗಿದ್ದರೆ, ಇಷ್ಟಪಡುವ ವಸ್ತುಗಳನ್ನು ಬಡ್ಡಿ ಇಲ್ಲದೆ ಖರೀದಿಸಬಹುದಾಗಿದೆ.
ನಿಮಗೆ ಬಡ್ಡಿ ಇಲ್ಲದೆ ಸಾಲ ಬೇಕು ಅಂದ್ರೆ ಈ 5 ವಿಭಾಗಗಳಲ್ಲಿ ಯಾವುದು ನಿಮ್ಮ ವ್ಯಾಪ್ತಿಗೆ ಬರುತ್ತದೆಯೋ ನೋಡಿಕೊಂಡು ಸದುಪಯೋಗ ಪಡೆಯಬಹುದಾಗಿದೆ.