ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಯನ್ನ ಮಂಡಿಸಿದೆ. ಕೇಂದ್ರ ಕಾನೂನು ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಅವರು ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ್ದಾರೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸಿ ಅದರಂತೆ ವರದಿ ಸ್ವೀಕರಿಸಿ ಮಸೂದೆಯನ್ನ ಲೋಕಸಭೆಯಲ್ಲಿ ಮಂಡಿಸಲಾಗಿದೆ.
2024 ಮಾರ್ಚ್ 24 ರಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮಿತಿಯು ಸಿದ್ಧಪಡಿಸಿದ 18,000 ಪುಟಗಳ ಸುದೀರ್ಘ ಒಂದು ರಾಷ್ಟ್ರ ಒಂದು ಚುನಾವಣೆಯ ಅಂತಿಮ ವರದಿಯನ್ನು ಭಾರತದ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದರು.
ಒಂದು ರಾಷ್ಟ್ರ ಒಂದು ಚುನಾವಣೆ ಎಂದರೆ?
ಒಂದು ರಾಷ್ಟ್ರ ಒಂದು ಚುನಾವಣೆ ಎಂದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಭಾರತೀಯರು ಒಂದೇ ಸಮಯದಲ್ಲಿ ಅಥವಾ ಒಂದೇ ವರ್ಷದಲ್ಲಿ ಮತದಾನ ಮಾಡುವುದು.
ಪೂರ್ವ ತಯಾರಿ ಏನು ಮಾಡಬೇಕು?
‘ಒಂದು ದೇಶ ಒಂದು ಚುನಾವಣೆ’ ಜಾರಿಯಲ್ಲಿ ಹಲವು ಸವಾಲುಗಳಿವೆ. ಉದಾಹರಣೆಗೆ, ಮೊದಲು ಈ ಮಸೂದೆಯನ್ನು ಜಾರಿಗೆ ತರಲು ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಲೋಕಸಭೆಯ ಅವಧಿಯನ್ನು ವಿಸ್ತರಿಸಬೇಕು ಅಥವಾ ಪೂರ್ಣಗೊಳಳುವ ಮೊದಲೇ ವಿಸರ್ಜನೆ ಮಾಡಬೇಕು. ಇದರ ಜೊತೆಗೆ, ಕೆಲವು ವಿಧಾನಸಭೆಗಳ ಅವಧಿಯನ್ನು ಕೂಡ ಅವಧಿ ಮೀರಿ ಮುನ್ನಡೆಸಬೇಕಾಗುತ್ತದೆ. ಆದರೆ ಕೆಲವು ರಾಜ್ಯ ಸರ್ಕಾರಗಳ ಅಧಿಕಾರಾವಧಿಯು ಅವಧಿಗೆ ಮುಂಚೆಯೇ ಮುಟುಕುಗೊಳಿಸಬೇಕು. ಈ ಮಸೂದೆ ಜಾರಿಗೆ ತರುವ ಮೊದಲು ಎಲ್ಲ ಪಕ್ಷಗಳ ನಡುವೆ ಒಮ್ಮತ ಮೂಡಿಸುವುದು ಅವಶ್ಯಕವಾಗಿದೆ. ಆದರೆ, ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಈಗಾಗಲೇ ಅದಕ್ಕೆ ಸಿದ್ದ ಎಂದು ಹೇಳಿದೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಗೆ ಒತ್ತಾಯ ಏಕೆ?
ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸುವ ಮೊದಲು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಒಂದೇ ಬಾರಿ ಚುನಾವಣೆಗಳನ್ನು ನಡೆಸುವುದರಿಂದ ಸರ್ಕಾರದ ಹಣವನ್ನು ಉಳಿಸಬಹುದು ಎಂದು ಹೇಳಿದ್ದರು, ಪ್ರತಿ ಎಲೆಕ್ಷನ್ಗೂ ಅಧಿಕಾರಿಗಳು ಹಾಗೂ ಭದ್ರತಾ ಪಡೆಗಳನ್ನು ಚುನಾವಣೆಗೆ ಒದಗಿಸುವುಸು ತಪ್ಪುತ್ತದೆ. ಇದು ಸರ್ಕಾರದ ಬೊಕ್ಕಸಕ್ಕೆ ಬೀಳುವ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ರಾಜಕೀಯ ಪಕ್ಷಗಳ ಪ್ರಚಾರದ ಹಣಕ್ಕೆ ಸಹ ಕಡಿವಾಣ ಹಾಕಬಹುದು. ಪ್ರತಿ ಬಾರಿ ಚುನಾವಣೆರ ನಡೆದಾಗಲೂ ನೀತಿ ಸಂಹಿತೆ ಜಾರಿಯಾಗುತ್ತಿದ್ದು, ಅಭಿವೃದ್ದಿ ಯೋಜನೆಗಳ ಅನುಷ್ಠಾನದ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ಗಮನಸೆಳೆದಿದ್ದಾರೆ.
ಸಾರ್ವಜನಿಕರ ಅಭಿಪ್ರಾಯ ಏನು?
ಜನವರಿಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸುಮಾರು 21,000 ಸಲಹೆಗಳನ್ನು ಸ್ವೀಕರಿಸಿದೆ ಎಂದು ಹೇಳಿತ್ತು, ಆದರೆ ಅದರಲ್ಲಿ ಶೇ. 81 ಕ್ಕೂ ಹೆಚ್ಚು ಜನರು ಒಂದು ರಾಷ್ಟ್ರ ಒಂದು ಚುನಾವಣೆಯ ಪರವಾಗಿದ್ದಾರೆ ಎಂದು ಹೇಳಿತ್ತು.