ಮೊದಲ ಬಾರಿ ಸಂಸತ್ ಪ್ರವೇಶಿಸಿರುವ ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಇಂದು ಲೋಕಸಭಾ ಅಧಿವೇಶನದಲ್ಲಿ ಮಂಡನೆಯಾದ ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆಯನ್ನು ವಿರೋಧಿಸಿದ್ದಾರೆ, ಇದು ಭಾರತದ ಒಕ್ಕೂಟದ ವಿರುದ್ದ ಇದೆ, ಸಂವಿಧಾನ ವಿರೋಧಿ ಮಸೂದೆಯಾಗಿದೆ ಎಂದು ಟಿಕಿಸಿದ್ದಾರೆ. ಈ ಮಸೂದೆಯನ್ನು ವಿರೋಧಿಸುವ ಕಾಂಗ್ರೆಸ್ಸಿನ ಪ್ರಸ್ತುತ ನಿಲುವನ್ನು ಪುನರುಚ್ಚರಿಸಿದ ಪ್ರಿಯಾಂಕಾ ಗಾಂಧಿ, “ಇದು ಸಂವಿಧಾನ ವಿರೋಧಿ ಮಸೂದೆ. ಇದು ನಮ್ಮ ರಾಷ್ಟ್ರದ ಫೆಡರಲಿಸಂಗೆ ವಿರುದ್ಧವಾಗಿದೆ. ನಾವು ಈ ಮಸೂದೆಯನ್ನು ವಿರೋಧಿಸುತ್ತಿದ್ದೇವೆ” ಎಂದು ಖಡಕ್ ಆಗಿ ಸಂಸತ್ ನಲ್ಲಿ ಅಬ್ಬರಿಸಿದ್ದಾರೆ.
ಸಂಸತ್ನಲ್ಲಿ ಇಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸಿದರು. ಲೋಕಸಭೆಯ ಸ್ಪೀಕರ್ ಸದನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ಪರಿಚಯಿಸುವ ಮತದ ಫಲಿತಾಂಶವನ್ನು ಪ್ರಕಟಿಸಿದರು. ಅದರಲ್ಲಿ 269 ಸದಸ್ಯರು ಮಸೂದೆಯ ಪರವಾಗಿ ಮತ್ತು 196 ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದ್ದರು.