ನಟ ಶಿವರಾಜ್ಕುಮಾರ್ ಚಿಕಿತ್ಸೆಗಾಗಿ ಇಂದು (ಡಿ.18) ಅಮೆರಿಕಗೆ ತೆರಳುವ ಮುನ್ನ ಬೆಂಗಳೂರಿನ ನಾಗವಾರದಲ್ಲಿರುವ ಅವರ ನಿವಾಸಕ್ಕೆ ಕಿಚ್ಚ ಸುದೀಪ್ ಮತ್ತು ಬಿ.ಸಿ ಪಾಟೀಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆಗೆ ಅವರ ಪತ್ನಿ ಗೀತಾ ಇನ್ನೂ ಕೆಲವರು ಅಮೆರಿಕಕ್ಕೆ ತೆರಳಲಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು ಪ್ರಮುಖ ಶಸ್ತ್ರ ಚಿಕಿತ್ಸೆಯೊಂದಕ್ಕಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಇಂದು ಶಿವಣ್ಣ ತೆರಳಲಿದ್ದು, ಸುದೀಪ್ ಸೇರಿದಂತೆ ಹಲವು ಗಣ್ಯರು ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ್ದಾರೆ.ಇದೇ ಡಿ.24ರಂದು ಶಿವಣ್ಣಗೆ ಸರ್ಜರಿ ನಡೆಯಲಿದ್ದು, ಇಂದು ರಾತ್ರಿ 8.30ಕ್ಕೆ ಪತ್ನಿ ಮತ್ತು ಮಗಳು ನಿವೇದಿತಾ ಜೊತೆ ಯುಎಸ್ಗೆ ನಟ ತೆರಳಲಿದ್ದಾರೆ. ಹಾಗಾಗಿ ಅವರು ವಿದೇಶಕ್ಕೆ ಹೊರಡುವ ಮುನ್ನ ಶಿವಣ್ಣ ಮನೆಗೆ ಸುದೀಪ್ ಮತ್ತು ಬಿ.ಸಿ ಪಾಟೀಲ್ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಶಿವಣ್ಣ ಅವರ ನಿವಾಸಕ್ಕೆ ತೆರಳಿ ಅವರಿಗೆ ಶುಭ ಹಾರೈಸಿದ್ದಾರೆ. ಧೈರ್ಯ ತುಂಬವ ಕಾರ್ಯ ಮಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಹಲವು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಇದ್ದಾರೆ.
ಮಾಜಿ ಸಚಿವ, ನಟ ಬಿ ಸಿ ಪಾಟೀಲ್ ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಹೂಗುಚ್ಛ ನೀಡಿ ಶೀಘ್ರ ಗುಣಮುಖವಾಗಿ ಮರಳುವಂತೆ ಶುಭ ಹಾರೈಸಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರು ಸಹ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಶುಭ ಹಾರೈಸಿದ್ದಾರೆ. ಮಧು ಬಂಗಾರಪ್ಪ ಅವರು ಶಿವಣ್ಣ ಅವರ ಆಪ್ತ ಸಂಬಂಧಿ. ಗೀತಾ ಶಿವರಾಜ್ ಕುಮಾರ್ ಅವರ ಸಹೋದರ ಸಹ.
ನಟ ವಿನೋದ್ ರಾಜ್ ಕುಮಾರ್ ಅವರು ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರೊಟ್ಟಿಗೆ ಕೆಲ ಸಮಯ ಕಳೆದಿದ್ದಾರೆ. ಹಳೆಯ ಗೆಳೆಯರಾದ ಇಬ್ಬರೂ ತುಸು ಸಮಯ ಹರಟೆ ಹೊಡೆದಿದ್ದಾರೆ. ವಿನೋದ್ ತಮ್ಮ ತೋಟದಿಂದ ಹಣ್ಣು-ತರಕಾರಿಗಳನ್ನು ಶಿವಣ್ಣನಿಗೆ ನೀಡಿದ್ದಾರೆ.
ಕರುನಾಡ ಚಕ್ರವರ್ತಿಯ ಸಿನಿಮಾಗಳ ಬಗ್ಗೆ ಗಮನಿಸುವುದಾದರೆ, ಕೊನೆಯ ‘ಭೈರತಿ ರಣಗಲ್’ ಸೂಪರ್ ಹಿಟ್ ಆಗಿದೆ. ಇತ್ತೀಚೆಗಷ್ಟೇ ಹೊಸ ಸಿನಿಮಾ ಘೋಷಣೆಯಾಗಿದೆ. ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಾದ ಪವನ್ ಒಡೆಯರ್ ಜೊತೆ ಶಿವಣ್ಣ ಕೈ ಜೋಡಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ನಿರ್ದೇಶನದ ’45’, ಹೇಮಂತ್ ರಾವ್ ಅವರ ಭೈರವನ ಕೊನೆ ಪಾಠ, ‘A for ಆನಂದ್’ ಹೀಗೆ 8 ರಿಂದ 10 ಸಿನಿಮಾಗಳು ಶಿವರಾಜ್ಕುಮಾರ್ ಅವರ ಬಳಿ ಇದೆ. ನಟ ಶೀಘ್ರವೇ ಗುಣಮುಖರಾಗಿ, ಚಿತ್ರೀಕರಣದಲ್ಲಿ ಭಾಗಿಯಾಗಲಿ ಅನ್ನೋದು ಕೋಟ್ಯಂತರ ಅಭಿಮಾನಿಗಳ ಹಾರೈಕೆ.