ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ಅಪ್ಪು ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಅಜರಾಮರ. ನಗುಮೊಗದ ರಾಜಕುಮಾರನ ಬಗ್ಗೆ ಬಣ್ಣಿಸಲು ಪದಗಳೇ ಸಾಲದು.
20 ವರ್ಷದ ನಂತರ ಅಭಿಮಾನಿಗಳ ಅಪ್ಪು ಪುನೀತ್ ರಾಜ್ಕುಮಾರ್ ಅವರ ಕನಸನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನನಸು ಮಾಡುತ್ತಿದ್ದಾರೆ. ಇದರ ಜೊತೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಶಿಕ್ಷಣ ಕ್ಷೇತ್ರ ಪ್ರವೇಶಿಸುವುದು ನನ್ನ ಹಾಗೂ ಪುನೀತ್ ಅವರ 20 ವರ್ಷದ ಕನಸು ಈಗ ನನಸಾಗುತ್ತಿದೆ. ಬೆಂಗಳೂರಲ್ಲಿ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಆರಂಭಿಸುವ ತಮ್ಮ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವುದಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಅನ್ನು ಆರಂಭ ಮಾಡಿದ್ದಾರೆ. ಈ ಮೂಲಕ ಪುನೀತ್ ರಾಜ್ಕುಮಾರ್ 20 ವರ್ಷಗಳ ಹಿಂದೇನೆ ಕಂಡಿದ್ದ ಕನಸನ್ನು ಈಗ ನನಸು ಮಾಡಿದ್ದಾರೆ. ಇತ್ತೀಚೆಗೆ ಇದರ ಅನಾವರಣ ಕೂಡ ನಡೆದಿದೆ.
ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ನಿರ್ಮಾಣಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೊಂದಿಗೆ ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಮತ್ತು ಡಾ. ಬಿಂದು ರಾಣಾ ಅವರು ಕೈಜೋಡಿಸಿದ್ದಾರೆ. ಮಕ್ಕಳ ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ಏರಿಸುವುದಕ್ಕೆ ಈ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ವಿಶಿಷ್ಟವಾದ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಇಟ್ಟುಕೊಂಡಿದೆ.
ಈ ಪ್ರೀಸ್ಕೂಲ್ ಬೆಂಗಳೂರಿನಲ್ಲಿ ಮೊದಲು ಆರಂಭ ಆಗಲಿದೆ. ಆರಂಭದಲ್ಲಿ ಐದು ಕೇಂದ್ರಗಳನ್ನು ಆರಂಭಿಸುವ ಆಲೋಚನೆಯಿದೆ. ಇದರಲ್ಲಿ ಆಧುನಿಕ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಸೇರಿ ಸಿದ್ಧಪಡಿಸಿದ ವಿನೂತನವಾದ ಪಠ್ಯಕ್ರಮಗಳನ್ನು ಅಳವಡಿಸಲಾಗಿದೆ. ಎರಡು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಇಲ್ಲಿ ಶಿಕ್ಷಣವನ್ನು ನೀಡಲಾಗುತ್ತೆ. ಸದ್ಯ ಬೆಂಗಳೂರಿನಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಆಲೋಚನೆಯನ್ನು ಇಟ್ಟುಕೊಂಡಿದ್ದಾರೆ. ಈ ಮೂಲಕ ಇಂತಹ ವಿನೂತನ ಶಿಕ್ಷಣ ಭಾರತದಾದ್ಯಂತ ಇರುವ ಎಲ್ಲಾ ಮಕ್ಕಳಿಗೂ ಸಿಗುವಂತೆ ಆಗಬೇಕು ಎಂಬುದು ಇವರ ಆಶಯ. ಸಿನಿಮಾ ನಿರ್ಮಾಣದ ಜೊತೆ ಜೊತೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಅಪ್ಪು ಅಭಿಮಾನಿಗಳಿಗೆ ಖುಷಿಕೊಟ್ಟಿದೆ.