ಧಾರವಾಡ: ಬೆಂಗಳೂರಿನ ಸಿರಿವರ ಪ್ರಕಾಶನ ಹೊರ ತಂದಿರುವ ಹಿರಿಯ ಪತ್ರಕರ್ತ, ಲೇಖಕ ಶಂಕರ ಪಾಗೋಜಿ ಅವರ ಗಾಂಧಿ ಮಂದಿರ ಕಥಾ ಸಂಕಲನ ಬಿಡುಗಡೆ ಹಾಗೂ ಕೊನೆ ನಮಸ್ಕಾರ ಹಾಸ್ಯ ನಾಟಕ ಪ್ರದರ್ಶನವನ್ನು ನಗರದ ಕವಿಸಂನಲ್ಲಿ ಡಿ.20 ರಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ ಎಂದು ಹಿರಿಯ ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ್ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಗಾಂಧಿ ಮಂದಿರ ಕಥಾ ಸಂಕಲನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರಂಗಾಯಣ ನಿರ್ದೇಶಕ ರಾಜು ತಾಳಿಕೊಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಆಗಮಿಸಲಿದ್ದು, ನಟರಾಜ ಮೂರಶಿಳ್ಳಿ ಅವರು ಕಥಾ ಸಂಕಲನ ಪರಿಚಯಿಸಲಿದ್ದಾರೆ.
ಸಿರಿವರ ಪ್ರಕಾಶನದ ಪ್ರಕಾಶಕರಾದ ರವೀಂದ್ರನಾಥ ಸಿರಿವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದ ಕೊನೆಯಲ್ಲಿ ದೇವರಹುಬ್ಬಳ್ಳಿಯ ಅವ್ವ ಸಾಂಸ್ಕೃತಿಕ ಟ್ರಸ್ಟ ವತಿಯಿಂದ ಬನಹಟ್ಟಿಯ ಬಿ.ಆರ್.ಪೊಲೀಸ್ ಪಾಟೀಲ ಬರೆದಿರುವ ಹಾಸ್ಯಭರಿತ ಕೊನೆ ನಮಸ್ಕಾರ ನಾಟಕವು ನನ್ನ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಮಾಸ್ತರ್ ಪಾತ್ರದಲ್ಲಿ ಡಾ.ಬಸವರಾಜ ಹೊಂಗಲ್, ಶ್ರೀಕೃಷ್ಣ ಪಾತ್ರದಲ್ಲಿ ಶಂಕರ ಪಾಗೋಜಿ, ಅರ್ಜುನನ ಪಾತ್ರದಲ್ಲಿ ಡಾ.ವಿಶ್ವನಾಥ ಕೋಟಿ ಸೇರಿದಂತೆ ವಿವಿಧ ಪಾತ್ರಗಳು ಪ್ರೇಕ್ಷಕರನ್ನು ರಚಿಸಲಿದ್ದು, ಇಡೀ ನಾಟಕದಲ್ಲಿ ಹಾಸ್ಯ ಅನಾವರಣಗೊಳ್ಳಲಿದೆ. ಈ ನಾಟಕ ವೀಕ್ಷಣೆ ಉಚಿತವಾಗಿದ್ದು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಹದೇವ ಪಾಗೋಜಿ, ದೀಪಕ ದುರ್ಗಾಯಿ, ಬಸವರಾಜ ಗುಡ್ಡಪ್ಪನವರ ಹಾಜರಿದ್ದರು.