ಬಿಗ್ಬಾಸ್ ಮನೆಯಲ್ಲಿ ಮತ್ತೆ ಗೌತಮಿ ಜಾಧವ್ ಹಾಗೂ ಮೋಕ್ಷಿತಾ ಪೈ ಮಧ್ಯೆ ಹೊಗೆ ಹೊತ್ತಿಕೊಂಡಿದೆ. ಇಬ್ಬರ ನಡುವಿನ ಮುನಿಸು ಸರಿ ಹೋಗಿದೆ ಅನ್ನುವಷ್ಟರಲ್ಲಿ ಬಿಗ್ ಬಾಸ್ ನೀಡಿದ ಹೊಸ ಟಾಸ್ಕ್ನಲ್ಲಿ ಟ್ವಿಸ್ಟ್ ಸಿಕ್ಕಿದೆ. ಮೋಕ್ಷಿತ ಅವರು ಗೌತಮಿ ಮೇಲೆ ಸೇಡು ತೀರಿಸಿಕೊಳ್ಳೋದನ್ನು ಮುಂದುವರಿಸಿದ್ದಾರೆ.ಗೌತಮಿ ಮತ್ತು ಮೋಕ್ಷಿತಾ ನಡುವಿನ ಕಿತ್ತಾಟಕ್ಕೆ ಮತ್ತೆ ವೀಕ್ಷಕರು ಶಾಕ್ ಆಗಿದ್ದಾರೆ. ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್ಗೆ ಸಂಬಂಧಿಸಿ ಕಲರ್ಸ್ ಕನ್ನಡ ಪ್ರೊಮೋ ರಿಲೀಸ್ ಮಾಡಿದೆ.
ಅದರಲ್ಲಿ ಬಿಗ್ಬಾಸ್ ಟಾಸ್ಕ್ ನೀಡಿದ್ದಾರೆ. ಪಕ್ಷಪಾತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ ಎಂಬ ಆಯ್ಕೆಗೆ ಸ್ಪರ್ಧಿಗಳನ್ನು ಸೂಚಿಸುವಂತೆ ಬಿಗ್ಬಾಸ್ ಸೂಚನೆ ನೀಡಿದ್ದಾರೆ. ಟಾಸ್ಕ್ನ ಮುಂದುವರಿದ ಭಾಗವಾಗಿ ತಾವು ತೆಗೆದುಕೊಂಡ ವ್ಯಕ್ತಿಯ ಹೆಸರನ್ನು ಹೇಳಿ, ಅದಕ್ಕೆ ಸೂಕ್ತ ಕಾರಣ ನೀಡಿ ಸ್ವಿಮ್ಮಿಂಗ್ ಪೂಲ್ಗೆ ತಳ್ಳಬೇಕಾಗಿರುತ್ತದೆ.
ಗೌತಮಿ ಬಗ್ಗೆ ಮೋಕ್ಷಿತಾ ತಮ್ಮ ಬೇಸರ ಹೊರಗೆ ಹಾಕಿದ್ದಾರೆ. “ನನಗೆ ಏನೇ ಆದ್ರೂ ಅಷ್ಟೇನೆ ನೋಡಿ. ಗೌತಮಿಗೆ ಬೇಸರ ಆಗೋದೇ ಇಲ್ಲ. ಒಂದು ವೇಳೆ ಮಂಜಣ್ಣನಿಗೆ ಏನಾದ್ರೂ ಆದ್ರೆ ಮುಗಿತು. ಸಿಕ್ಕಾಪಟ್ಟೆ ಫೀಲ್ ಆಗುತ್ತದೆ” ಈ ರೀತಿಯ ಒಂದು ದೂರನ್ನ ಗೌತಮಿ ವಿರುದ್ಧ ಮೋಕ್ಷಿತಾ ಮಾಡಿದ್ದಾರೆ.ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಗ್ಯುದ್ಧ ನಡೆದಿದೆ.
ಈ ಒಂದು ಕಾರಣಕ್ಕೇನೆ ಆಟದ ಪ್ರಕಾರ ಗೌತಮಿಯನ್ನ ಮೋಕ್ಷಿತಾ ಪೈ ಈಜುಕೊಳಕ್ಕೆ ತಳ್ಳಿದ್ದಾರೆ. ಇದೇ ರೀತಿ ಮನೆಯ ಇತರ ಸದಸ್ಯರು ತಮ್ಮ ಅಭಿಪ್ರಾಯಗಳನ್ನ ಹೇಳಿಕೊಂಡು, ಆಯಾ ಸದಸ್ಯರನ್ನ ಈಜುಕೊಳಕ್ಕೆ ಜೋರಾಗಿಯೇ ತಳ್ಳಿದ್ದಾರೆ.