ಒಂಭತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರ ಡಿಸೆಂಬರ್ 20 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.
ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ವೀಕ್ಷಿಸಲು ಉಪೇಂದ್ರ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಡಿ.20ಕ್ಕೆ ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಸಿನಿಪ್ರಿಯರು ಆನ್ಲೈನ್ ಟಿಕೆಟ್ ಬುಕ್ಕಿಂಗ್ಗಳತ್ತ ಮುಖಮಾಡಿದ್ದಾರೆ. ಕೇವಲ ಎರಡೇ ಎರಡು ಅಕ್ಷರದಲ್ಲಿ ಚಿತ್ರಕ್ಕೆ ಶೀರ್ಷಿಕೆ ಇಟ್ಟಿರುವ ಉಪೇಂದ್ರ, ಟೈಟಲ್ನಲ್ಲಿ ಮಾತ್ರ ವಿಭಿನ್ನತೆ ಮತ್ತು ವಿಶೇಷತೆಯನ್ನಿಡದೆ, ಕಥಾಹಂದರದಲ್ಲಿ ಹಲವು ಕುತೂಹಲಕಾರಿ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳನ್ನು ಬೆಳ್ಳಿ ಪರದೆಯ ಮುಖೇನ ಸಿನಿರಸಿಕರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.
ಪ್ರಸ್ತುತ ಕೆನಡಾ, ಆಸ್ಟ್ರೇಲಿಯಾ, ಅಮೆರಿಕ, ನ್ಯೂಜಿಲೆಂಡ್, ಯುಎಇ-ಜಿಸಿಸಿ ನಗರಗಳಲ್ಲಿನ ಚಿತ್ರಮಂದಿರಗಳಲ್ಲಿ ಯುಐ ಸಿನಿಮಾ ಆಯಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ಉಪ್ಪಿ ತಮ್ಮ ಜಾಲತಾಣದ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿದೇಶದಲ್ಲಿ ಯಾವ ನಗರದ ಥಿಯೇಟರ್ಗಳಲ್ಲಿ ಯಾವ ಭಾಷೆಯಲ್ಲಿ ತೆರೆ ಕಾಣಲಿದೆ ಎಂಬುದನ್ನು ತಿಳಿಸಿದ್ದಾರೆ. ಸದ್ಯ ಅಭಿಮಾನಿಗಳಲ್ಲಿ ಯುಐ ಕ್ರೇಜ್ ಹೆಚ್ಚಿದ್ದು, ಸಿನಿಮಾ ಹೇಗಿರಲಿದೆ? ಎಂಬ ಕುತೂಹಲ ಮೂಡಿದೆ. ಚಿತ್ರ ನೋಡಿದ ಬಳಿಕ ಪ್ರೇಕ್ಷಕರು ಕೊಡುವ ಪ್ರತಿಕ್ರಿಯೆ ಏನು? ಎಂಬುದನ್ನು ಕಾದು ತಿಳಿಯಬೇಕಿದೆ.