ಬೀದರ್ನಲ್ಲಿ ದಿನ ಕಳೆದಂತೆ ಚಳಿ ವಿಪರೀತವಾಗುತ್ತಿದ್ದು, ಚಳಿಯನ್ನ ತಡೆಯಲಾರದೇ ಬೀದರ್ನ ಜನ ನಡುಗುತ್ತಿದ್ದಾರೆ. 10 ರಿಂದ 12 ಡಿಗ್ರಿ ಇದ್ದ ಕನಿಷ್ಠ ತಾಪಮಾನ ಏಕಾಏಕಿ 7.5 ಡಿಗ್ರಿ ಸೆಲ್ಷಿಯಸ್ಗೆ ಇಳಿಕೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ ಬೀಸುವ ಕಾರಣ, ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಜನರಿಗೆ ಈ ಮೂಲಕ ಹಲವಾರು ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ. ದಿನೇ ದಿನೆ ಕನಿಷ್ಠ ತಾಪಮಾನ ಕುಸಿಯುತ್ತಿರುವುದನ್ನ ಕಂಡು ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ 5 ರಿಂದ 6 ಡಿಗ್ರಿ ತಾಪಮಾನ ದಾಖಲು ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಇದರಿಂದ ಸಾರ್ವಜನಿಕರು ಬೆಚ್ಚನೆಯ ಉಡುಪು ಧರಿಸುವುದು, ದ್ವಿಚಕ್ರ ವಾಹನದಲ್ಲಿ ಓಡಾಡೋದನ್ನು ಕಡಿಮೆ ಮಾಡುವುದು, ಸೂರ್ಯೋದಯಕ್ಕಿಂತ ಮುನ್ನ, ಸೂರ್ಯಾಸ್ತದ ನಂತರ ವಾಕಿಂಗ್ ಮಾಡದಿರುವುದು, ಬೆಳಗಿನ ವೇಳೆ , ರಾತ್ರಿ ಹೊತ್ತು ಕೃಷಿ ಚಟುವಟಿಕೆ ಬೇಡ ಎಂದು ಜಿಲ್ಲಾಡಳಿತ ಖಡಕ್ ಎಚ್ಚರಿಕೆಗಳನ್ನು ಕೊಟ್ಟಿದೆ. ಇದೇ ಪ್ರಥಮ ಬಾರಿಗೆ ತಾಪಮಾನ ಇಷ್ಟು ಕಡಿಮೆ ಪ್ರಮಾಣಕ್ಕೆ ಇಳಿದಿರುವುದು ಎಂಬುದನ್ನು ಹವಾಮಾನ ಇಲಾಖೆ ತಿಳಿಸಿದೆ.