ಬಿಗ್ಬಾಸ್ ಗೇಮ್ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದ ಗೋಲ್ಡ್ ಸುರೇಶ್ ಇದ್ದಕ್ಕಿದ್ದಂತೆ ದಿಢೀರ್ ಹೊರಬಂದಿದ್ದರು. ಜನಪ್ರಿಯ ರಿಯಾಲಿಟಿ ಶೋನಿಂದ ಯಾಕೆ ಅರ್ಧಕ್ಕೆ ಬಂದಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಇನ್ನೂ ಹಾಗೆಯೇ ಇದೆ. ಖುದ್ದು ಗೋಲ್ಡ್ ಸುರೇಶ್ ಅವರೇ, ತಾವು ಯಾಕೆ ಬಿಗ್ಬಾಸ್ ಶೋನಿಂದ ಅರ್ಧಕ್ಕೆ ಹೊರಬಂದೆ ಎಂದು ಲೈವ್ ನಲ್ಲಿ ಬಂದು ಅವರೇ ಖುದ್ದಾಗಿ ಕ್ಲಾರಿಟಿ ಕೊಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್ ಸುರೇಶ್ ಅವರು ಎಕ್ಸಿಟ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯಿತು. ಆರಂಭದಲ್ಲಿ ಅವರ ತಂದೆ ನಿಧನ ಹೊಂದಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಅದು ಸುಳ್ಳು ಎನ್ನುವ ವಿಚಾರ ತಿಳಿಯಿತು. ಆ ಬಳಿಕ ಬಂದಿದ್ದೇ ಸಾಲಬಾಧೆ ವಿಚಾರ. ಅವರು ಸಾಲ ಮಾಡಿಕೊಂಡಿದ್ದಕ್ಕೆ ಹೊರ ಬಂದರು ಎಂದು ಹೇಳಲಾಯಿತು. ಈಗ ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ನಲ್ಲಿ ಲೈವ್ನಲ್ಲಿ ಬಂದ ಸುರೇಶ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
‘ಬಿಗ್ ಬಾಸ್ನಿಂದ ಆಫರ್ ಬಂದಾಗ ಶಾಕ್ ಹಾಗೂ ಖುಷಿ ಎರಡೂ ಆಯಿತು. ಅವರು ಯಾಕೆ ನನಗೆ ಆಫರ್ ಕೊಟ್ಟರು ಗೊತ್ತಿಲ್ಲ. ಆದರೆ, ಈ ಜರ್ನಿ ರೋಚಕ ಆಗಿತ್ತು. ಎಲ್ಲೋ ಇದ್ದವನನ್ನು ಗುರುತಿಸಿ, ಕರೆದಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಹೋಗಿ ಸುಮಾರು ದಿನ ಆಡಿ ಬಂದಿದ್ದೇನೆ’ ಎಂದು ಖುಷಿ ಹೊರಹಾಕಿದರು ಗೋಲ್ಡ್ ಸುರೇಶ್.
ಹೊರ ಬಂದ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಅವರು, ‘ನಾನು ಹೊರಗೆ ಬಿಸ್ನೆಸ್ ಹ್ಯಾಂಡಲ್ ಮಾಡ್ತಾ ಇದ್ದೆ. ಬಿಗ್ಬಾಸ್ ಮನೆಗೆ ಹೋಗುವುದಕ್ಕೂ ಮೊದಲು ಈ ಬಗ್ಗೆ ಯೋಚಿಸಿದ್ದೆ. ಬಿಗ್ಬಾಸ್ಗೆ ಹೋದರೆ ಬಿಸಿನೆಸ್ ಯಾರು ನೋಡಿಕೊಳ್ತಾರೆ ಎಂದು ಚಿಂತಿಸಿದ್ದೆ. ತುಂಬಾ ಯೋಚಿಸಿದ ನಂತರ ಮೊದಲ ಬಾರಿಗೆ ನನ್ನ ಧರ್ಮ ಪತ್ನಿಗೆ ಆ ಜವಾಬ್ದಾರಿ ನೀಡಿದ್ದೆ. ಆಕೆಗೆ ಬುಸಿನೆಸ್ನಲ್ಲಿ ಯಾವುದೇ ಅನುಭವ ಇರಲಿಲ್ಲ. ನಾನು ಎಲ್ಲವನ್ನೂ ಒಟ್ಟಿಗೆ ಬಿಟ್ಟು ಹೋಗಿದ್ದರಿಂದ ಅವೆಲ್ಲವನ್ನೂ ನಿಭಾಯಿಸೋದು ಆಕೆಗೆ ಕಷ್ಟವಾಗಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಕೆ ಮಾನಸಿಕವಾಗಿ ಕುಗ್ಗಿ ಹೋದಳು. ಇದರಿಂದ ನಾನು ಬಿಗ್ಬಾಸ್ ಮನೆಯಿಂದ ಆಚೆ ಬಂದೆ ಎಂದಿದ್ದಾರೆ.
ಹೊರಗೆ ಹರಿದಾಡುತ್ತಿರುವ ವದಂತಿ ಬಗ್ಗೆ ಮಾತನಾಡಿರುವ ಅವರು, ‘ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಸುದ್ದಿ ಮಾಡುವವರು ಮಾಡಲಿ. ನಾನು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಆಪ್ತರಿಗೆ ನನ್ನ ಬಗ್ಗೆ ಗೊತ್ತಿದೆ. ನನಗೆ ಅಷ್ಟು ಸಾಕು. ಕಾಲಿನ ಗಾಯದಿಂದ ತುಂಬಾ ವೀಕ್ ಆಗಿ ಬಂದಿದ್ದೇನೆ. ಆರೋಗ್ಯದ ಸಮಸ್ಯೆ ಕಾಡ್ತಾ ಇತ್ತು. ಆರೋಗ್ಯ ಸುಧಾರಿಸುತ್ತಿದೆ. ಎಲ್ಲರೂ ತುಂಬಾನೇ ಸಪೋರ್ಟ್ ಮಾಡಿದ್ದೀರಾ. ಎಲ್ಲರಿಗೂ ಥ್ಯಾಂಕ್ಸ್. ಮತ್ತೆ ಅವಕಾಶ ಸಿಕ್ಕರೆ ಹೋಗುತ್ತೇನೆ. ನಿರಾಸೆ ಆಗಿದ್ರೆ ಕ್ಷಮಿಸಿ’ ಎಂದಿದ್ದಾರೆ ಸುರೇಶ್.