ಆಫೀಸ್ ನಲ್ಲಿ ಕಾಟ ತಡಿಯಲಾರದೆ ಮ್ಯಾನೇಜರ್ ಗೆ ಉದ್ಯೋಗಿಗಳೇ ಸ್ಕೆಚ್ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು, ಮ್ಯಾನೇಜರ್ ಹೇರುತ್ತಿದ್ದ ಕೆಲಸದ ಒತ್ತಡ ತಡೆಯಲಾರದೆ ಹಾಗೂ ಕಿರಿಕಿರಿಯಿಂದ ಬೇಸತ್ತಿದ್ದ ಉದ್ಯೋಗಿಗಳು, ಮ್ಯಾನೇಜರ್ ಬುದ್ದಿ ಕಲಿಸಲು ಗೂಂಡಾಗಳಿಗೆ ಸುಪಾರಿ ನೀಡಿದ್ದಾರೆ. ಗೂಂಡಾಗಳು ಈ ಮ್ಯಾನೇಜರ್ಗೆ ಹಾಡಹಗಲೇ ಕಲ್ಯಾಣ್ ನಗರದ ರಸ್ತೆಯಲ್ಲಿ, ಕಬ್ಬಿಣದ ರಾಡ್ನಿಂದ ಥಳಿಸುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಮನಸ್ತಾಪ, ಕೆಲಸದ ಒತ್ತಡ, ಮೇಲಾಧಿಕಾರಿಗಳಿಂದ ಕಿರಿಕಿರಿಯೂ ಸರ್ವೇಸಾಮಾನ್ಯ. ಇನ್ನು ಹಲ್ಲೆಗೊಳಗಾದ ಮ್ಯಾನೇಜರ್ರನ್ನ ಸುರೇಶ್ ಎಂದು ಹೇಳಲಾಗುತ್ತಿದೆ. ಸುಮಾರು 1 ವರ್ಷದ ಹಿಂದೆ ಸಂಸ್ಥೆಗೆ ಕೆಲಸಕ್ಕೆಂದು ಸೇರಿದ್ದರು. ಅವರು ಸಂಸ್ಥೆಯ ಇತರ ಇಬ್ಬರು ಉದ್ಯೋಗಿಗಳಾದ ಉಮಾಶಂಕರ್ ಮತ್ತು ವಿನೇಶ್ಗೆ ತುಂಬ ಒತ್ತಡ ಹೇರುತ್ತಿದ್ದರಂತೆ. ಎಲ್ಲರ ಮುಂದೆಯೇ ಅವಮಾನ ಮಾಡುತ್ತಿದ್ದರಂತೆ. ಇದರಿಂದ ಕೋಪಗೊಂಡಿದ್ದ, ಈ ಇಬ್ಬರು ಉದ್ಯೋಗಿಗಳು, ಮ್ಯಾನೇಜರ್ ವಿರುದ್ಧವೇ ಸಂಚು ರೂಪಿಸಿ, ಹಲ್ಲೆಗೆ ಸುಪಾರಿ ನೀಡಿ ಈಗ ಪೊಲೀಸರ ಅತಿಥಿ ಆಗಿದ್ದಾರೆ. ಮಾರ್ಚ್ 31 ರಂದು ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.