ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಸಚಿವೆ ಲಕ್ಷೀ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಪದ ಪ್ರಯೋಗ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಸಿ. ಟಿ. ರವಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಗುರುವಾರ ಸಂಜೆ ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಪ್ರಯೋಗ ಮಾಡಿದ ಆರೋಪ ಸಿ. ಟಿ. ರವಿ ವಿರುದ್ಧ ಕೇಳಿ ಬಂದಿತ್ತು. ಇದೇ ವಿಚಾರ ಸಂಬಂಧ ವಿಧಾನ ಮಂಡಲದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಸಂಜೆ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಬಂಧನಕ್ಕೆ ಒಳಗಾದ ಬಳಿಕ ರಾತ್ರಿಯಿಡೀ ಹಲವೆಡೆ ಪೊಲೀಸ್ ಜೀಪ್ ನಲ್ಲಿ ಸಿಟಿ ರವಿ ಅವರನ್ನು ಸುತ್ತಾಡಿಸಿದ ಆರೋಪವೂ ಕೇಳಿ ಬಂದಿತ್ತು. ಶುಕ್ರವಾರ ಬೆಳಗ್ಗೆಯಿಂದಲೇ ನ್ಯಾಯಾಂಗ ಸಮರವೂ ಆರಂಭವಾಗಿತ್ತು.
ಮೂರು ಕೋರ್ಟ್ ಗಳಲ್ಲಿ ಕಾನೂನು ಸಮರ!
ಸಿ. ಟಿ. ರವಿ ಜಾಮೀನು ಅರ್ಜಿ ವಿಚಾರಣೆ ಕುರಿತಾಗಿ ಮೊದಲಿಗೆ ಬೆಳಗಾವಿಯ ಜೆಎಂಎಫ್ಸಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಲಯ, ಈ ಪ್ರಕರಣ ತನ್ನ ವ್ಯಾಪ್ತಿಗೆ ಬರೋದಿಲ್ಲ ಎಂದು ಅಭಿಪ್ರಾಯಪಟ್ಟು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿತ್ತು. ಈ ವಿಚಾರ ಸಂಬಂಧ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ, ಶನಿವಾರಕ್ಕೆ ವಿಚಾರಣೆ ಮುಂದೂಡಿತು. ಇದರ ಬೆನ್ನಲ್ಲೇ ಹೈಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ಆರಂಭವಾಯ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಂ.ಜಿ.ಉಮಾ ನೇತೃತ್ವದ ಪೀಠವು ಆರೋಪಿಯನ್ನು ತಕ್ಷಣವೇ ಬಿಡುಗಡೆ ಮಾಡಿ. ಸಿ.ಟಿ.ರವಿ ಈಗ ಎಲ್ಲಿದ್ದಾರೋ ಅಲ್ಲಿಯೇ ಬಿಡುಗಡೆ ಮಾಡಿ ಎಂದು ಮಧ್ಯಂತರ ಆದೇಶ ನೀಡಿದ್ದಾರೆ. ಅಲ್ಲದೇ, ತನಿಖೆಗೆ ಸಹಕರಿಸಬೇಕು ಎಂದು ಸಿ.ಟಿ.ರವಿಗೆ ಷರತ್ತನ್ನು ಕೋರ್ಟ್ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸಿ. ಟಿ. ರವಿ ಅವರಿಗೆ ಭಾರೀ ರಿಲೀಫ್ ನೀಡಿತು. ಸಿ. ಟಿ. ರವಿ ಅವರನ್ನು ತಕ್ಷಣದಿಂದಲೇ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ನೀಡಿತು. ಜೊತೆಯಲ್ಲೇ ಎಫ್ ಐಆರ್ ರದ್ದತಿಗೆ ನಿರಾಕರಿಸಿದ ಹೈಕೋರ್ಟ್, ಪ್ರಕರಣದ ತನಿಖೆಗೆ ಸಹಕರಿಸುವಂತೆ ಸಿಟಿ ರವಿ ಅವರಿಗೆ ಸೂಚಿಸಿತು. ಇತ್ತ, ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಬೆಳಗಾವಿಯಿಂದ ಬೆಂಗಳೂರಿಗೆ ಬೆಳಗಾವಿ ಪೊಲೀಸರ ವಶದಲ್ಲಿ ಆಗಮಿಸುತ್ತಿದ್ದ ಸಿಟಿ ರವಿ ಅವರಿಗೆ ಬಿಡುಗಡೆಯ ಗುಡ್ ನ್ಯೂಸ್ ಸಿಕ್ಕಿದೆ. ಬಿಜೆಪಿ ನಾಯಕರೂ ಕೂಡಾ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.
ಸದ್ಯ ಸಿ.ಟಿ ರವಿ ಅವರಿಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಎಫ್ಐಆರ್ ರದ್ದು ಕೋರಿ ಸಲ್ಲಿಸಿರೋ ಅರ್ಜಿ ವಿಚಾರಣೆ ಮುಂದೆ ನಡೆಯಲಿದೆ. ಸಿ.ಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಹಾಗೆಯೇ ಪೊಲೀಸರ ವಿಚಾರಣೆಗೆ ಹಾಜರಾಗಬೇಕು ಎಂದು ಸಿ.ಟಿ ರವಿ ಅವರಿಗೆ ಸೂಚನೆ ನೀಡಿದೆ.