ಲೋಕಸಭಾ ಚುನಾವಣಾ ಅಖಾಡದಲ್ಲಿ ಬಿಜೆಪಿಗೆ ಕಾಂಗ್ರೆಸ್ “ಡಬಲ್ ಕೌಂಟರ್” ನೀಡಿದೆ. ಬಿಜೆಪಿಯ ಪ್ರಚಾರದ ಅಸ್ತ್ರವಾಗಿದ್ದ “ಡಬಲ್ ಇಂಜಿನ್” ಬ್ರಹ್ಮಾಸ್ತ್ರವನ್ನೇ ಬಳಸಿಕೊಂಡಿರುವ ಕಾಂಗ್ರೆಸ್, ಡಬಲ್ ಇಂಜಿನ್ಗೆ ಕೌಂಟರ್ ಕೊಡಲು “ಡಬಲ್ ಗ್ಯಾರಂಟಿ” ಪ್ರತ್ಯಾಸ್ತ್ರ ಬಳಸಲು ಮುಂದಾಗಿದೆ. ಕೇಂದ್ರದಲೂ ಬಿಜೆಪಿ, ರಾಜ್ಯದಲೂ ಬಿಜೆಪಿ ಸರ್ಕಾರ ಇದ್ದರೆ ಅಭಿವೃದ್ಧಿಗೆ ವೇಗ ಸಿಗಲಿದೆ ಅನ್ನೋದು ಬಿಜೆಪಿ ವಾದ. ಇದಕ್ಕೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಪಾಳಯ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ, ರಾಜ್ಯದಲೂ ಕಾಂಗ್ರೆಸ್ ಸರ್ಕಾರ ಇದ್ದರೆ ದೇಶದ ಜನರಿಗೆ “ಡಬಲ್ ಗ್ಯಾರಂಟಿ” ಫಿಕ್ಸ್ ಎನ್ನುವ ಭರವಸೆ ನೀಡಿದೆ. ಇದಕ್ಕೆ ಕರ್ನಾಟಕ ಮಾದರಿಯನ್ನೇ ಜನರ ಮುಂದಿಡಲು ಕೈಕಲಿಗಳು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಕೇವಲ 6 ತಿಂಗಳಲ್ಲಿ, ಐದೂ ಗ್ಯಾರಂಟಿಗಳನ್ನ ಈಡೇರಿಸುವ ಮೂಲಕ ಗಮನ ಸೆಳೆದಿದೆ.
ಸಿದ್ದರಾಮಯ್ಯ ಸರ್ಕಾರದ ಸಾಧನೆಯನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲು, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದೆ. ಹೀಗಾಗಿ ಕಾಂಗ್ರೆಸ್ ಪ್ರಣಾಳಿಕೆ 5 ಭರವಸೆಗಳು ಹಾಗೂ 25 ಗ್ಯಾರಂಟಿಗಳನ್ನ ಹೆಚ್ಚೆಚ್ಚು ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಅಲ್ಲದೇ ಕರ್ನಾಟಕ ಮಾದರಿಯನ್ನೂ ಜನರಿಗೆ ಮುಟ್ಟಿಸಲು ಹುಕುಂ ನೀಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಮೊನ್ನೆ ಕೋಲಾರದಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ಪ್ರಚಾರದ ಬಸ್ ಗಳ ಮೇಲೂ “ಡಬಲ್ ಗ್ಯಾರಂಟಿ” ಎಂಬ ಸ್ಟಿಕ್ಕರ್ ಹಾಕಿದ್ದು ಕಂಡು ಬಂದಿದೆ. ಲೋಕಸಭಾ ಚುನಾವಣಾ ಅಖಾಡದಲ್ಲಿ ಪ್ರಚಾರದ ಭರಾಟೆ ಜೋರಾಗುತ್ತಿದ್ದರೆ, ಇತ್ತ ಕಾಂಗ್ರೆಸ್, ಬಿಜೆಪಿ ಮಧ್ಯೆ ಡಬಲ್ ವಾರ್ ಶುರುವಾಗಿದೆ. ಈ ಡಬಲ್ ವಾರ್ನಲ್ಲಿ ಗೆದ್ದು ಬೀಗೋದು ಯಾರು ಅನ್ನೋದನ್ನ ಕಾದಷ್ಟೇ ನೋಡಬೇಕು.