ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಕುರಿತು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸುದ್ದಿಗೋಷ್ಠಿ ನಡೆಸಿದರು. ಈ ಬಾರಿ ಬಿಜೆಪಿ ಒಗ್ಗಟ್ಟಿನಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದೆ. ನಮಗೆ 5 ದಿನ ಮಾತ್ರ ಚರ್ಚೆಗೆ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶದಲ್ಲಿ ವಕ್ಫ್, ಬಾಣಂತಿಯರ ಸಾವು, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸರ್ಕಾರದ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.
ವಕ್ಫ್ ಬೋರ್ಡ್ ವಿಚಾರವಾಗಿ ನಮ್ಮ ಹೋರಾಟದ ಫಲವಾಗಿ ಸರ್ಕಾರ ನ್ಯಾಯಾಂಗ ತನಿಖೆ ಮಾಡಿದೆ. ಬಾಣಂತಿಯರ ಸಾವು ವಿಚಾರದಲ್ಲೂ ನ್ಯಾಯಾಂಗ ತನಿಖೆ ಮಾಡಲು ಒಪ್ಪಿದ್ದು, ಇದು ನಮ್ಮ ಹೋರಾಟದ ಫಲ ಎಂದಿದ್ದಾರೆ.
ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ 30 ಕ್ಕೂ ಹೆಚ್ಚು ಶಾಸಕರು ಚರ್ಚೆ ಮಾಡಿದ್ದಾರೆ. ನಮ್ಮ ಶಾಸಕರು ಒಂದಲ್ಲ ಒಂದು ವಿಚಾರದಲ್ಲಿ ಮಾತಾಡೋ ವ್ಯವಸ್ಥೆ ಮಾಡಿದ್ದೇನೆ. ಬಿಜೆಪಿ ಶಾಸಕರಿಗೆ ಸದನದ ಒಳಗೆ ಮಾತಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಉತ್ತರ ಕರ್ನಾಟಕ ಚರ್ಚೆ ಬಗ್ಗೆ ನೀಲನಕ್ಷೆ ಇರಬೇಕು ಅಂತ ಸರ್ಕಾರಕ್ಕೆ ಹೇಳಿದ್ದೇವೆ ಎಂದರು. ಸಿಎಂ ಸಂತೆ ಭಾಷಣ ಬಿಟ್ಟು ಘೋಷಣೆ ಮಾಡಿದ ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.