ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯ ಹೊಸ ವರ್ಷದಲ್ಲಿ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದ್ದು, ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಅಸಮಾಧಾನಿತ ನಾಯಕರ ಬಣ ತಂಡಗಳನ್ನಾಗಿ ಮಾಡಿಕೊಂಡು ರಾಜ್ಯ ಪ್ರವಾಸ ಕೈಗೊಳ್ಳಲು ಚಿಂತನೆ ನಡೆಸಿದೆ. ಈ ರಾಜ್ಯ ಪ್ರವಾಸಕ್ಕೂ ಮತ್ತು ಎರಡನೇ ಹಂತದ ವಕ್ಫ್ ಆಸ್ತಿ ವಿವಾದ ಕುರಿತ ಹೋರಾಟಕ್ಕೂ ಸಂಬಂಧವಿಲ್ಲ.
ಈಗಿರುವ ಹಿರಿಯ ನಾಯಕರ ನೇತೃತ್ವದಲ್ಲಿ ನಾಲೈದು ತಂಡಗಳನ್ನಾಗಿ ಮಾಡಿಕೊಂಡು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಕಡೆಗಣಿಸಲ್ಪಟ್ಟ ಭಾವನೆ ಹೊಂದಿರುವ ಅಸಮಾಧಾನಿತ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲು ಉದ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿ ಭೇಟಿ ಬಳಿಕ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕತ್ವದ ವಿರುದ್ಧ ಗುಟರು ಹಾಕುತ್ತಿದ್ದ ಯತ್ನಾಳ ಮತ್ತಿತರ ನಾಯಕರ ಬಣ ತುಸು ಮೌನಕ್ಕೆ ಶರಣಾಗಿತ್ತು.
ವಕ್ಸ್ ಆಸ್ತಿ ವಿವಾದ ಕುರಿತಂತೆ ಮೊದಲ ಹಂತದ ಹೋರಾಟ ಮುಗಿಸಿರುವ ಯತ್ನಾಳ ಬಣದ ನಾಯಕರು ಈ ತಿಂಗಳ 27ರ ಬಳಿಕ ಎರಡನೇ ಹಂತದ ಹೋರಾಟ ಆರಂಭಿಸಲು ಮುಂದಾಗಿದ್ದಾರೆ. ಬಹುತೇಕ ಬಳ್ಳಾರಿ ಅಥವಾ ವಿಜಯನಗರ ಜಿಲ್ಲೆಗಳಿಂದ ಈ ಹೋರಾಟ ಆರಂಭಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಆ ಜಿಲ್ಲೆಗಳಲ್ಲಿನ ವಕ್ಫ್ ವಿವಾದ ಸಂಬಂಧ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.