ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ವಂಚಕನೊಬ್ಬ ನಕಲಿ ಖಾತೆ ತೆರೆದು ಸರ್ಕಾರದ ಮಹತ್ವದ ಯೋಜನೆಯಡಿ ಸುಮಾರು 10 ಸಾವಿರ ರೂಪಾಯಿ ಪಡೆದಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಬಿಜೆಪಿ ಛತ್ತೀಸ್ಗಢದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಮಹತಾರಿ ವಂದನ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ವಿವಾಹಿತ ಮಹಿಳೆಯರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ನೀಡಲಾಗುತ್ತಿದ್ದು, ಲಕ್ಷಾಂತರ ಮಹಿಳೆಯರು ಈ ಪ್ರಯೋಜನ ಪಡೆಯುತ್ತಿದ್ದಾರೆ.
ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿ ವೀರೇಂದ್ರ ಕುಮಾರ್ ಜೋಶಿ ಎಂಬಾತ ಬಸ್ತಾರ್ ನಲ್ಲಿ ಆನ್ಸನ್ ಬ್ಯಾಂಕ್ ಖಾತೆ ರಚಿಸಿ ಬಿಜೆಪಿ ಪ್ರಾರಂಭಿಸಿದ್ದ, ವಂದನಾ ಯೋಜನೆಗೆ ಮಾರ್ಚ್ ನಲ್ಲಿ ಅಂಗನವಾಡಿಯಲ್ಲಿ ಅರ್ಜಿ ಹಾಕಿದ್ದ. ಅದರಂತೆ 10 ತಿಂಗಳವರೆಗೆ ಸುಮಾರು 10 ಸಾವಿರ ಪಡೆದಿದ್ದ ಎನ್ನಲಾಗಿದೆ. ಇದೀಗ ಆರೋಪಿ ಜೋಶಿಯ ವಂಚನೆ ಬೆಳಕಿಗೆ ಬರುತ್ತಿದ್ದಂತೆ ಬಸ್ತಾರ್ ಕಲೆಕ್ಟರ್ ಎಸ್. ಹರೀಶ್ ಅವರು ತನಿಖಾ ತಂಡ ರಚಿಸಿ ತನಿಖೆ ನಡೆಸಿದ್ದು, ಆರೋಪಿ ವೀರೇಂದ್ರ ಕುಮಾರ್ ಜೋಶಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ವಿಚಾರಣೆ ನಡೆಸಿದ್ದು, ಅರ್ಜಿ ಹಾಕಲು ಸಹಾಯ ಮಾಡಿದ್ದ ಅಂಗನವಾಡಿ ಕಾರ್ಯಕರ್ತೆ ವೇದಮತಿ ಮತ್ತು ಮೇಲ್ವಿಚಾರಕರನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ವರದಿಯ ಪ್ರಕಾರ, ಆರೋಪಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಸರ್ಕಾರದ ಈ ಯೋಜನೆಗೆ ಸನ್ನಿ ಲಿಯೋನ್ ಹೆಸರಿನಲ್ಲಿ ಅರ್ಜಿ ಹಾಕಿದ್ದು, ಪತಿಯ ಹೆಸರನ್ನು ಜಾನಿ ಸಿನ್ಸ್ ಎಂದು ನಮೂದಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ವಂಚನೆಗೆ ಆರೋಪಕ್ಕೆ ಸಂಬಂಧಪಟ್ಟಂತೆ FIR ದಾಖಲಾಗಿದೆ.